ಹೊಸದಿಲ್ಲಿ: ಇಂದಿನಿಂದ 2020 ರ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ. ಕೊರೋನಾ ವೈರಸ್ ನಡುವೆ 17 ನೇ ಲೋಕಸಭೆಯ ನಾಲ್ಕನೇ ಅಧಿವೇಶನ ಮತ್ತು ರಾಜ್ಯಸಭೆಯ 252 ನೇ ಅಧಿವೇಶನ ಇಂದು ನಡೆಯಲಿದೆ.
ಕೊರೋನಾ ಸಾಂಕ್ರಾಮಿಕದ ಮಧ್ಯೆ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಆದ್ದರಿಂದ ಕೊರೋನಾ ಮಾರ್ಗಸೂಚಿಗಳ ಪ್ರಕಾರ ಅಧಿವೇಶನವನ್ನು ನಡೆಸಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಂಕ್ರಾಮಿಕ ರೋಗದ ಮಧ್ಯೆ ಎಲ್ಲಾ ಸಂಸದರಿಗೆ ಪತ್ರದೊಂದಿಗೆ ಸುರಕ್ಷತಾ ಕೋವಿಡ್ ಕಿಟ್ ಕಳುಹಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಇದೇ ಮೊದಲಬಾರಿಗೆ ಲೋಕ ಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಒಟ್ಟಿಗೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 14, 2020 ರಂದು ಪ್ರಾರಂಭವಾಗಲಿದ್ದು, ಈ ಅಧಿವೇಶನದಲ್ಲಿ ಯಾವುದೇ ರಜಾದಿನಗಳಿಲ್ಲದೆ ಸತತ 18ದಿನಗಳ ಅಧಿವೇಶನ ನಡೆಯಲಿದ್ದು, ಅಕ್ಟೋಬರ್ 1ರಂದು ಮುಕ್ತಾಯವಾಗಲಿದೆ.
ಪ್ರತಿ ಸದನಕ್ಕೆ ನಾಲ್ಕು ಗಂಟೆಗಳ ಅಧಿವೇಶನ ನಡೆಯಲಿದೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ರಾಜ್ಯಸಭೆ ಕಲಾಪ ಮತ್ತು ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ಲೋಕಸಭೆ ಕಲಾಪ ಇರುತ್ತದೆ.
ಮುಂಗಾರು ಅಧಿವೇಶನದಲ್ಲಿ 23 ಪ್ರಮುಖ ಮಸೂದೆಗಳಿಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದ್ದು, ಚೀನಾ ಭಾರತ ಗಡಿ ಬಿಕ್ಕಟ್ಟು, ಪೆಟ್ರೋಲ್ ಡೀಸಲ್ ದರ, ಜಿ.ಎಸ್.ಟಿ, ಕೊರೋನಾ ನಿಯಂತ್ರಣ, ನಿರುದ್ಯೋಗ ಸಮಸ್ಯೆ ಹಾಗೂ ಮುಂತಾದ ವಿಚಾರಗಳ ಕುರಿತಾಗಿ ಚರ್ಚೆ ನಡೆಯಲಿದ್ದು, ಕೇಂದ್ರ ಸರ್ಕಾರದ ನಿಯಮಗಳನ್ನು ವಿರೋಧಿಸಲು ವಿ.ಪಕ್ಷಗಳು ಸಿದ್ದವಾಗಿದೆ.