ಬೆಂಗಳೂರು: ದೇಶದಲ್ಲಿ ಕೊರೋನಾ ವೈರಾಣು ಸೋಂಕಿತರ ಸಂಖ್ಯೆ ಹೆಚ್ಚಗುತ್ತಿರುವ ಹಿನ್ನೆಲೆ ರಾಜ್ಯದ 9 ಜಿಲ್ಲೆ ಸೇರಿದಂತೆ ದೇಶದಲ್ಲಿನ 75 ಜಿಲ್ಲೆಗಳು ಮಾ.31ರವರೆಗೂ ಸಂಪೂರ್ಣ ಬಂದ್ ಮಾಡಲು ಸರ್ಕಾರ ಆದೇಶಿಸಿದೆ.
ಅಂತೆಯೇ ಭಾರತೀಯ ರೈಲ್ವೆ ಕೂಡ ಸರಕು ಸಾಗನೆ ರೈಲ್ವೆ ಸೇವೆ ಹೊರತುಪಡಿಸಿ ಇನ್ನುಳಿದಂತೆ ದೇಶಾದ್ಯಂತ ಮೆಟ್ರೋ, ಉಪನಗರ ಸೇರಿದಂತೆ ಎಲ್ಲಾ ಪ್ರಯಾಣಿಕ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ. ಭಾನುವಾರ ಜನತಾ ಕರ್ಫ್ಯೂ ಮುಗಿದಿದ್ದು ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳು ಅಗತ್ಯ ಸೇವೆ ಹೊರತುಪಡಿಸಿ ಇನ್ನುಳಿದಂತೆ ಮಾ.31 ವರೆಗೆ ಸಂಪೂರ್ಣ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಸೋಂಕಿತರು ಹಾಗೂ ಶಂಕಿತರು ಪತ್ತೆಯಾಗಿರುವ ಹಿನ್ನೆಲೆ ಬೆಂಗಳೂರು ನಗರ ಸೇರಿದಂತೆ 9 ಜಿಲ್ಲೆಗಳಲ್ಲಿ ವೈದ್ಯಕೀಯ, ದಿನಸಿ, ಕೃಷಿ, ಗೃಹ ಸಂಬಂಧಿ ವ್ಯವಹಾರ ಹೊರತುಪಡಿಸಿ ಇನ್ನುಳಿದಂತೆ ಸಾರ್ವಜನಿಕ ಸಂಚಾರವನ್ನು ಮಾ.31ರವರೆಗೆ ನಿರ್ಬಂಧಿಸಲಾಗಿದ್ದು ಅಂತರ್ ಜಿಲ್ಲೆ ಸಾರ್ವಜನಿಕ ಸಾರಿಗೆ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ಅಂತಾರಾಜ್ಯ ಬಸ್ ಸ್ಥಗಿತ: ಬೇರೆ ರಾಜ್ಯಗಳಿಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ದಿನನಿತ್ಯ ಕಾರ್ಯಚರಿಸಲಿದ್ದ ಬಸ್ಗಳನ್ನೂ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು ಕೇಂದ್ರದಿಂದ ಹೊರಡಲಿರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರಕ್ಕೆ ತೆರಳಲಿರುವ 389 ಬಸ್ಗಳು, ರಾಮನಗರದಿಂದ ತೆರಳುವ 102 ಬಸ್, ತುಮಕೂರು-19, ಕೋಲಾರ 77, ಚಿಕ್ಕಬಳ್ಳಾಪುರ 104, ಮಂಡ್ಯ 14, ಚಾಮರಾಜನಗರ 32, ಹಾಸನ 13, ಚಿಕ್ಕಮಗಳೂರು 28, ಮಂಗಳೂರು 79, ಪುತ್ತೂರು 41, ದಾವಣಗೆರೆ 30, ಶಿವಮೊಗ್ಗ 38, ಚಿಕ್ಕೋಡಿ 16, ಮೈಸೂರು ಗ್ರಾಮಾಂತರ 94 ಸೇರಿದಂತೆ ರಾಜ್ಯಾದ್ಯಂತ ಅಂತಾರಾಜ್ಯ ಕಾರ್ಯಾಚರಣೆ ನಡೆಸುವ 2018 ಬಸ್ಗಳನ್ನು ರದ್ದು ಮಾಡಲಾಗಿದೆ.
ಐಷಾರಾಮಿ ಬಸ್ಗಳಿಗೂ ನಿರ್ಬಂಧ: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಪ್ರತಿನಿತ್ಯ ಕಾರ್ಯಾಚರಿಸುತ್ತಿರುವ ಐರಾವತ ಕ್ಲಬ್ ಕ್ಲಾಸ್, ಐರಾವತ, ಕೊರೊನಾ, ಎ.ಸಿ ಸ್ಲೀಪರ್, ಸ್ಲೀಪರ್ ಬಸ್, ಅಂಬಾರಿ ಕ್ಲಾಸ್, ರಾಜಹಂಸ ಬಸ್ಗಳ ಸಂಚಾರವನ್ನು ಮಾ.31 ರವರೆಗೆ ಸ್ಥಗಿತಗೊಳಿಸಿದ್ದು ಸಾಮಾನ್ಯ ಸಾರಿಗೆ ಬಸ್ ಮಾತ್ರ ಸಂಚರಿಸಲಿದೆ.
ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಅಂತರ್ ರಾಜ್ಯ ಸಾರಿಗೆ ಸೇವೆಯಲ್ಲಿಯೂ ವ್ಯತ್ಯಯವಾಗಲಿದ್ದು ಈಶಾನ್ಯ ವಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳಲಿರುವ 431, ಆಂದ್ರಪ್ರದೇಶ- 133, ತೆಲಂಗಾಣ-258, ತಮಿಳುನಾಡು-2, ಗೋವಾ-40 ಬಸ್ಸುಗಳನ್ನು ರದ್ದು ಮಾಡಲಾಗಿದೆ. ವಾಯುವ್ಯ ಸಾರಿಗೆ ಗಳಲ್ಲಿ ಮಹಾರಾಷ್ಟ್ರಕ್ಕೆ ತೆರಳಲಿರುವ 503, ಆಂಧ್ರಪ್ರದೇಶ-37, ತೆಲಂಗಾಣ-50,ತಮಿಳುನಾಡು-6, ಗೋವಾ-84 ಬಸ್ಸುಗಳನ್ನು ರದ್ದು ಮಾಡಲಾಗಿದೆ.