ಹೊಸದಿಲ್ಲಿ: ಕೋವಿಡ್ -19 ಲಸಿಕೆ ಖರೀದಿ ಮತ್ತು ವಿತರಣೆಯ ವಿವರಗಳನ್ನು ಚರ್ಚಿಸಲು ಕೇಂದ್ರ ಇಂದು ತಜ್ಞರ ಸಮಿತಿಯ ನಿರ್ಣಾಯಕ ಸಭೆ ಕರೆದಿದೆ.
ಭಾರತದಲ್ಲಿ ಈಗಾಗಲೇ 3 ಲಸಿಕೆಗಳು ಅಭಿವೃದ್ಧಿಯಾಗಿದ್ದು, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿದೆ. ಈ ನಡುವೆ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್ ಅವರ ನೇತೃತ್ವದಲ್ಲಿ ಸಮಿತಿಯು ಲಸಿಕೆಯ ಖರೀದಿ ಕುರಿತು ಚರ್ಚೆ ನಡೆಸಲಿದೆ.
ಈ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯ ಹಾಗೂ ಸಂಸ್ಥೆಗಳನ್ನು ಒಳಗೊಂಡ ಪರಿಣಿತರ ಸಮಿತಿಯನ್ನು ರಚಿಸಿದೆ. ಈ ಸಮಿತುಯು ಭಾರತದಲ್ಲಿ ಕೊರೋನಾ ಲಸಿಕೆ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಪರಿಶೀಲಿಸಲಿದ್ದು, ಲಸಿಕೆಗೆ ಅಗತ್ಯವಿರುವ ಹಣಕಾಸು ಯೋಜನೆಗೆ ಸಮಿತಿ ಆದ್ಯತೆ ನೀಡಲಿದೆ.
ಸಮಿತಿಯಲ್ಲಿ ಎಐಎಂಎಸ್ ನಿರ್ದೇಶಕ ಡಾ. ರಣದೀಪ್ ಸಿಂಗ್ ಗುಲೇರಿಯಾ, ವಿದೇಶಾಂಗ ವ್ಯವಹಾರ, ಜೈವಿಕ ತಂತ್ರಜ್ಞಾನ, ಆರೋಗ್ಯ ಸೇವೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸೇರಿದಂತೆ ಅನೇಕ ಪ್ರತಿನಿಧಿಗಳನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆ ಇದರಲ್ಲಿ ಸೇರಿದ್ದು, ಇದು ಮೊದಲನೇ ಹಂತದ ಪ್ರಯೋಗದಲ್ಲಿದೆ ಮತ್ತು ಜೈಡಸ್ ಕ್ಯಾಡಿಲಾ ಅವರ ಸಂಭಾವ್ಯ ಲಸಿಕೆ ಈಗ ಎರಡನೇ ಹಂತದ ಪ್ರಯೋಗಕ್ಕೆ ಪ್ರವೇಶಿಸಿದೆ.
ಯುಕೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆ, ಇದಕ್ಕಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಪಾಲುದಾರರಾಗಿದ್ದು, ದೇಶದ 17 ಪ್ರದೇಶಗಳಲ್ಲಿ 2ನೇ ಮತ್ತು 3ನೇ ಹಂತದ ಪ್ರಯೋಗ ನಡೆಸಲು ನಿಯಂತ್ರಕ ಅನುಮೋದನೆ ನೀಡಲಾಗಿದೆ.