ಆಫೀಸಿನಲ್ಲಿ ಬೆಟ್ಟದಷ್ಟು ಕೆಲಸ, ಮನೆಯಲ್ಲೇನೂ ಕಮ್ಮಿ ಇಲ್ಲ. ಎಷ್ಟೇ ಕೆಲಸ ಇದ್ದರೂ ಮುಗಿಸಿ ಮಧ್ಯಾಹ್ನ ಒಂದು ಘಳಿಗೆ ನಿದ್ದೆ ಮಾಡೋಣವೆಂದರೆ ನಿದ್ದೆ ಬರುವುದಿಲ್ಲ. ದೇಹ ದಣಿದಿದ್ದರೂ ನಿದ್ದೆಗೆ ಬರ. ಇನ್ನು ರಾತ್ರಿ ಹಠ ಮಾಡಿ ಹತ್ತಕ್ಕೆ ಹಾಸಿಗೆ ಸೇರಿದರೂ ಮಲಗುವುದು ಮಾತ್ರ ೧೨ಕ್ಕೆ, ಇದು ಕಡಿಮೆ ಇನ್ನೂ ನಿಧಾನ ಆಗಬಹುದು. ಆದರೆ ಬೆಳಗ್ಗೆ ಬೇಗ ಏಳಲೇಬೇಕು. ಮತ್ತದೇ ಬ್ಯುಸಿ ಜೀವನ. ಇದು ನನ್ನೊಬ್ಬರ ಕಥೆ ಅಲ್ಲ. ಎಷ್ಟೋ ಜನರ ಕಥೆ. ನಿದ್ದೆಯ ಕೊರತೆ ಇದ್ದರೂ ನಿರ್ಲಕ್ಷಿಸಿ ಮುಂದುವರಿಯುತ್ತಿದ್ದೇವೆ. ಈಗ ಇದೇನು ಮುಖ್ಯ ಎಂದನಿಸಬಹುದು. ಆದರೆ ಮುಂದೊಂದು ದಿನ ಇದೇ ಶಾಪವಾಗಿ ಪರಿಣಮಿಸುತ್ತದೆ. ನಿದ್ದೆ ಏಕೆ ಬರುವುದಿಲ್ಲ, ನಿದ್ದೆ ಬರಲು ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ಇಲ್ಲಿದೆ..
- ಸಾಮಾನ್ಯವಾಗಿ ಮಾನಸಿಕ ನೆಮ್ಮದಿ ಇಲ್ಲವಾದರೆ ನಿದ್ದೆ ಬರುವುದಿಲ್ಲ. ರಾತ್ರಿಯಿಡೀ ಚಿಂತೆಯಲ್ಲಿ ಮುಳುಗಿ ದಣಿದು ಮಲಗಬೇಕಷ್ಟೆ. ಇಂಥ ಸಮಸ್ಯೆಯಿರುವವರು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಆರೋಗ್ಯಕ್ಕಿಂತ ಮುಖ್ಯವಾದ್ದು ಯಾವುದೂ ಇಲ್ಲ.
- ಮಲಗಲು ಒಂದು ಸಮಯ ನಿಗದಿ ಮಾಡಿ. ಆ ಸಮಯಕ್ಕೆ ಇಷ್ಟವಿಲ್ಲದಿದ್ದರೂ ಮಲಗಿಬಿಡಿ. ಸ್ವಲ್ಪ ದಿನ ಇದೇ ರೀತಿ ರೂಢಿಯಾದರೆ ನಿದ್ದೆ ತಾನಾಗೇ ಬರುತ್ತದೆ. ವೀಕೆಂಡ್ ಎಂದು ತಡಮಾಡಿ ಮಲಗದಿರಿ. ನಿಮ್ಮ ದೇಹದ ಗಡಿಯಾರಕ್ಕೆ ಈ ನಿದ್ದೆಯ ಸಮಯ ಅಭ್ಯಾಸವಾಗುವವರೆಗೂ ಹೀಗೆ ಮಾಡಿ.
- ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ. ಮೊಬೈಲ್ನಲ್ಲಿ ಸಿನಿಮಾ ನೋಡುತ್ತಾ ಮಲಗುವ ಬದಲು ನಾಲ್ಕು ಪುಟ ಓದಿ ಮಲಗಿ. ಪುಸ್ತಕ ಓದಿದಂತೆಯೂ ಆಗುತ್ತದೆ. ಕಣ್ಣಿಗೆ ಯಾವ ತೊಂದರೆಯೂ ಆಗದು. ಹಾಗೆ ನಿಮ್ಮ ನಿದ್ದೆ ಸಂಪೂರ್ಣವಾಗುತ್ತದೆ.
- ಮಧ್ಯಾಹ್ನ ಮಲಗಿದರೆ ರಾತ್ರಿ ನಿದ್ದೆಗೆ ತೊಂದರೆ ಆಗುತ್ತದೆ ಎನ್ನುವವರು ಮಧ್ಯಾಹ್ನದ ನಿದ್ದೆ ಅವಾಯ್ಡ್ ಮಾಡಿ. ಮಧ್ಯಾಹ್ನ ಮಲಗಿ ಎದ್ದರೆ ರಾತ್ರಿ ನಿದ್ದೆ ಬರುವುದಿಲ್ಲ. ಅದರಿಂದ ಮತ್ಯಾವುದೋ ಅಭ್ಯಾಸ ರೂಢಿಸಿಕೊಳ್ಳುತ್ತೀರಿ.
- ನಿಮ್ಮ ದೇಹವನ್ನು ಚೆನ್ನಾಗಿ ದಂಡಿಸಿ. ಈಗಂತೂ ಜಿಮ್ಗಳಿಲ್ಲದೆ, ಮನೆಯಿಂದ ಹೊರಹೋಗಲಾರದೆ ದೇಹಕ್ಕೆ ವರ್ಕೌಟ್ ಇಲ್ಲದಂತಾಗಿದೆ. ಈ ರೀತಿಯಾದರೆ ನಿದ್ದೆ ಬರುವುದಿಲ್ಲ. ಪ್ರತಿದಿನವೂ ವ್ಯಾಯಾಮ ಮಾಡಿ.
- ನಿಮ್ಮ ಬೆಡ್ರೂಂ ಹೇಗಿದೆ ಎಂದು ಒಮ್ಮೆ ನೋಡಿ, ನಿದ್ದೆ ಮಾಡಲು ತಣ್ಣನೆಯ, ಬೆಳಕಿಲ್ಲದ ವಾತಾವರಣ ಸೂಕ್ತ. ಇನ್ನು ಗೋಡಗಳ ಬಣ್ಣದ ಬಗ್ಗೆಯೂ ಗಮನ ಇರಲಿ.
- ನಿಮ್ಮ ಬೆಡ್ ಹಾಗೂ ಬೆಡ್ಶೀಟ್ ನಿಮಗಿಷ್ಟದಂತಿರಲಿ. ಬೆಡ್ಶೀಟ್ ದಿಂಬು ಎಲ್ಲವೂ ನಿಮ್ಮಿಷ್ಟದಂತಿದ್ದು, ನೋಡಿದ ಕೂಡಲೆ ನಿದ್ದೆಗೆ ಹೋಗುವ ಹಾಗಿರಬೇಕು.
- ಧೂಮಪಾನ,ಮದ್ಯಪಾನ, ಭೂರಿ ಭೋಜನ ರಾತ್ರಿ ಸಮಯ ಮಾಡದಿದ್ದರೆ ಒಳಿತು.
- ರೂಮ್ನಲ್ಲಿ ನಿದ್ದೆ ಬರಲಿಲ್ಲ ಎಂದರೆ ಏನಾದರೂ ಉಪಯುಕ್ತ ಕೆಲಸ ಮಾಡಿ, ದಣಿವಾದ ನಂತರ ಮತ್ತೆ ಬಂದು ಮಲಗಲು ಪ್ರಯತ್ನಿಸಿ.
- ಇಷ್ಟೆಲ್ಲ ಮಾಡಿದ ನಂತರವೂ ನಿಮಗೆ ನಿದ್ದೆ ಬರಲಿಲ್ಲವಾದರೆ, ವೈದ್ಯರನ್ನು ಭೇಟಿ ಮಾಡಿ.