Wednesday, July 6, 2022

Latest Posts

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಮೊದಲ ಸಭೆ: ಮಂದಿರ ನಿರ್ಮಾಣದ ದಿನಾಂಕ ಘೋಷಣೆ ಸಾಧ್ಯತೆ?

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಚಿಸಿದೆ. ಈ ಟ್ರಸ್ಟ್‌‌ನ ಮೊದಲ ಸಭೆ ಇಂದು ನಡೆಯಲಿದೆ.

ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ರಾಮ ಜನ್ಮಭೂಮಿ ಪ್ರಕರಣದಲ್ಲಿ ರಾಮಲಲ್ಲಾ ಪರ ವಾದ ಮಂಡಿಸಿದ್ದ ಟಿ.ಪರಾಶರನ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದು, ಅವರ ಮನೆಯೇ ಟ್ರಸ್ಟ್ ನ ಕಚೇರಿಯಾಗಿದೆ. ಅದು ದಿಲ್ಲಿಯ ಗ್ರೇಟರ್ ಕೈಲಾಶ್‌ನಲ್ಲಿದೆ. ಟ್ರಸ್ಟ್ ನ ಮೊದಲ ಸಭೆ ಈ ಕಚೇರಿಯಲ್ಲಿಯೇ ಸಂಜೆ 5 ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ಸ್ಥಾಪಕ ವಿಶ್ವಸ್ಥರ ಸಭೆ: ಕೇಂದ್ರ ಸರ್ಕಾರ ರಚಿಸಿರುವ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌‌ನಲ್ಲಿ 9 ಮಂದಿ ಸ್ಥಾಪಕ ವಿಶ್ವಸ್ಥರಿದ್ದಾರೆ. ಪ್ರಯಾಗ್‌ ರಾಜ್‌ ನ ಶ್ರೀಶಂಕರಾಚಾರ್ಯ ಪೀಠಾಧೀಶ ಶ್ರೀವಾಸುದೇವಾನಂದ ಸ್ವಾಮೀಜಿ, ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಹರಿದ್ವಾರ ಶ್ರೀಯುಗಪುರುಷ ಪರಮಾನಂದ ಸ್ವಾಮೀಜಿ, ಪುಣೆ ಶ್ರೀಗೋವಿಂದ ದೇವ್‌ ಗಿರಿ ಸ್ವಾಮೀಜಿ, ಅಯೋಧ್ಯೆ ವಿಮಲೆಂದ್ರ ಮೋಹನ್ ಪ್ರತಾಪ್ ಮಿಶ್ರಾ, ಡಾ. ಅನಿಲ್ ಮಿಶ್ರಾ, ಪಾಟ್ನ ಕಾಮೇಶ್ವರ್ ಚೌಪಾಲ್, ನಿರ್ಮೋಹಿ ಅಖಾಡ ಮಹಾಂತ್ ಧೀರೇಂದ್ರದಾಸ್ ಮತ್ತು ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಈ ಸಭೆಯಲ್ಲಿ ಭಾಗವಹಿಸಲು ಕೋರಿ ಟ್ರಸ್ಟ್‌ ಅಧ್ಯಕ್ಷ ಪರಾಶರನ್ ಅವರೇ ಪತ್ರ ಬರೆದಿದ್ದಾರೆ. ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಈ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳುತ್ತಿದ್ದಾರೆ.

ಕೇಂದ್ರ ಸರ್ಕಾರ ರಚಿಸಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅನ್ನು ಈಗಾಗಲೇ ನೋಂದಾಯಿಸಲಾಗಿದೆ. ಅಯೋಧ್ಯೆಯಲ್ಲಿರುವ 67.703 ಎಕರೆ ಭೂಮಿಯನ್ನು ಟ್ರಸ್ಟ್ ಗೆ ಹಸ್ತಾಂತರ ಮಾಡಲಾಗಿದೆ. ರಾಮ ಮಂದಿರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ತೀರ್ಮಾನಗಳನ್ನು ಈ ಟ್ರಸ್ಟ್‌ ಕೈಗೊಳ್ಳಲಿದೆ. ಮೊದಲ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೇ ಮೊದಲ ಸಭೆಯಲ್ಲಿಯೇ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸುವ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಹಲವು ವಿಚಾರ ತೀರ್ಮಾನವಾರಬೇಕು

ಟ್ರಸ್ಟ್ ನ ಸಭೆಗೆ ಆಹ್ವಾನ ಬಂದಿದೆ, ಆದರೆ ಸಭೆಯ ಅಜೆಂಡಾ ಬಂದಿಲ್ಲ. ಹಾಗಾಗಿ ಹೋದ ಮೇಲೆಯೇ ಸಭೆಯಲ್ಲಿ ಏನೆಲ್ಲ ಚರ್ಚೆಗೆ ಬರಲಿದೆ ಎಂಬುದು ಗೊತ್ತಾಗುತ್ತದೆ. ನಾವು ಕೆಲವು ವಿಷಯಗಳನ್ನು ತಯಾರಿ ಮಾಡಿಕೊಂಡು ಹೊಗುತ್ತಿದ್ದೇವೆ. ರಾಮ ಜನ್ಮಭೂಮಿಯಲ್ಲಿ ಆದಷ್ಟು ಬೇಗ ಮಂದಿರ ಆಗಬೇಕು. ಸಭೆಯಲ್ಲಿ ಮಂದಿರ ಕಾಮಗಾರಿ ಪ್ರಾರಂಭಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಸ್ಥಳ ಪರಿಶೀಲನೆ ನಡೆಯಬೇಕು, ಏನೆಲ್ಲ ತಯಾರಿಯಾಗಿದೆ, ಆರ್ಥಿಕ ತಯಾರಿ ಹೇಗಿದೆ? ಇದೆಲ್ಲವನ್ನು ನೋಡಿ, ಮಂದಿರದ ಸ್ವರೂಪ ಮೊದಲಾದವು ತೀರ್ಮಾನ ಆಗಬೇಕಿದೆ.

– ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss