ದುಬೈ: ಐಪಿಎಲ್ ನ 10ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ರೋಹಿತ್ ಶರ್ಮಾ ನೇತೃತ್ವದ ಮುಂಬೈಮೋಡಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದರೂ, ಮುಂದಿನ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ರೋಹಿತ್ ಹುಡುಗರು, ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಟ್ರ್ಯಾಕ್ ಹಿಡಿದಿದೆ.
ಇತ್ತ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿಗೆಲುವು ಸಾಧಿಸಿ, 2ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡು ಹಿನ್ನಡೆ ಅನುಭವಿಸಿದೆ.
ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಆರ್ಸಿಬಿ ತಂಡದಲ್ಲಿ ಉತ್ತಮ ಆಟಗಾರರಿದ್ದರು, ಇನ್ನೂ ಕೂಡ ಹೇಳಿಕೊಳ್ಳಯವಂತ ಪ್ರದರ್ಶನ ಹೊರ ಬಂದಿಲ್ಲ.
ಆರ್ಸಿಬಿಗೆ ಮುಖ್ಯ ವಾಗಿ ಬೌಲಿಂಗ್ ವಿಭಾಗದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಅನುಭವಿ ವೇಗಿ ಡೇಲ್ ಸ್ಟೇನ್ ಹೆಚ್ಚು ರನ್ ಬಿಟ್ಟುಕೊಡುತ್ತಿರುವುದು ಕ್ಯಾಪ್ಟನ್ ಕೊಹ್ಲಿಗೆ ದೊಡ್ಡ ತಲೆನೋವಾಗಿದೆ. ದುಬಾರಿ ಬೌಲರ್ ಉಮೇಶ್ ಯಾದವ್ ಅವರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸಬಹುದು ಎನ್ನಲಾಗಿದೆ. ಸ್ಟೇನ್ ಸ್ಥಾನದಲ್ಲಿ ಎಡಗೈ ವೇಗಿ ಇಸುರು ಉದನಾಗೆ ಸ್ಥಾನ ನೀಡಿ, ಜೋಶ್ ಫಿಲಿಪ್ಪೆ ಬದಲಿಗೆ ಮೋರಿಸ್ ಅವರನ್ನು ಆಡಿಸುವ ಸಾಧ್ಯತೆ ಇದೆ.
ಹಾಲಿ ಚಾಂಪಿಯನ್ ಮುಂಬೈ ತಂಡದಲ್ಲಿ ರೋಹಿತ್ ಹಾಗೂ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಡಿ ಕಾಕ್, ಪಾಂಡ್ಯ, ಪೊಲ್ಲಾರ್ಡ್ ಮುಂಬೈನ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ರಂತಹ ಶ್ರೇಷ್ಠ ವೇಗಿಗಳ ಬಲವಿದೆ. ಆದರೆ ಅನುಭವಿ ಸ್ಪಿನ್ನರ್ನ ಕೊರತೆ ಎದುರಿಸುತ್ತಿದೆ. ಒಟ್ಟಾರೆ ಪ್ರಸಕ್ತ ಟೂರ್ನಿಯಲ್ಲಿ ಒಂದು ಸೋಲು, ಒಂದು ಗೆಲುವು ಕಂಡಿರುವ ಉಭಯ ತಂಡಗಳು ಮತ್ತೊಂದು ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುವತ್ತ ಕಣ್ಣಿಟ್ಟಿವೆ.