ಮೈಸೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಯಲು ಲಾಕ್ ಡೌನ್ ನನ್ನು ಮುಂದುವರಿಸುವುದು ಉತ್ತಮವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕ ತೀರ್ಮಾನಿಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬುಧವಾರ ಮೈಸೂರಿನ ಜಿ.ಪಂ ಸಭಾಂಗಣದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಸಿಎಂಗಳ ಸಭೆ ನಡೆಸಿದ ಬಳಿಕ, ಏ.11ರ ಬಳಿಕ ತೀರ್ಮಾನ ಮಾಡುತ್ತೇನೆಂದು ಹೇಳಿದ್ದಾರೆ. ಈಗಾಗಲೇ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು, ಲಾಕ್ ಡೌನ್ ನನ್ನು ಏಪ್ರಿಲ್ ಅಂತ್ಯದವರೆಗೆ ಮುಂದುವರಿಸುವ ತೀರ್ಮಾನ ಮಾಡಿದ್ದಾರೆ.
ರಾಜ್ಯದಲ್ಲಿ ಈ ಬಗ್ಗೆ ಸಿಎಂ ಯಡಿಯೂರಪ್ಪ ಕೋವಿಡ್ ಕುರಿತು ತಜ್ಞರು, ವೈದ್ಯರ ಜತೆ ಚರ್ಚೆ ಮಾಡಲಿದ್ದಾರೆ. ನಂತರ ಸಂಪುಟ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ನುಡಿದರು. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಕೇಸ್ನಲ್ಲಿ ಬೆಂಗಳೂರು, ಮೈಸೂರು ಜಾಸ್ತಿಯಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹರಡಬಾರದು. ನಾವು 18 ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸಿ, ಉಳಿದನ್ನ ತೆರೆಯಬೇಕಾ? ಬೇಡವೇ ಎನ್ನುವುದನ್ನ ನೋಡಬೇಕಿದೆ ಎಂದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಜ್ಯುಬಿಲಿಯಂಟ್ ಔಷಧ ಕಾರ್ಖಾನೆ ನೌಕರರಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ, ಕಾರ್ಖಾನೆಯ ಮಾಲೀಕರಿಗೆ ತುರ್ತು ನೋಟಿಸ್ ಜಾರಿಗೊಳಿಸಲಾಗಿದೆ. ಮಾಲೀಕರು ಸ್ಪಂದಿಸದಿದ್ದರೆ, ಅವರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಾರ್ಖಾನೆಯ ಸೋಂಕಿತ ನೌಕರರು ಗುಣಮುಖರಾಗಿ ಬರುವ ತನಕ, ಕಾರ್ಖಾನೆಯನ್ನು ಪುನರಾರಂಭ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಜ್ಯುಬಿಲಿಯಂಟ್ ನೌಕರರಿಗೆ ಕೊರೋನಾ ಪಾಸಿಟಿವ್ ಹೇಗೆ ಬಂತು? ಆಸ್ಟ್ರೇಲಿಯಾದಿಂದ ಸ್ನೇಹಿತ ಬಂದಿದ್ದ ಅಂತಾರೆ. ಒಬ್ಬರು ಬೇರೆ ಕಡೆಯಿಂದ ಬಂದಿದ್ದರು ಅನ್ನುವ ಮಾಹಿತಿ ಇದೆ. ಚೀನಾದಿಂದ ಕಂಟೈನರ್ ಆಮದು ಮಾಡಿಕೊಂಡಿದ್ದರಿಂದ ಬಂದಿರಬಹುದೆಂದು ಹೇಳಲಾಗಿದೆ. ಕಂಟೈನರ್ ಮಾದರಿಯನ್ನ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ತನಿಖೆಗೆ ಸಹಕರಿಸಲು ಒಂದು ವಾರದಿಂದ ಮಾಲೀಕರು ಬಾರದೆ ನಿರ್ಲಕ್ಷಯವಹಿಸಿದ್ದರ ಬಗ್ಗೆ ಸರ್ಕಾರ ಪರಿಗಣಿಸಿದೆ. ಮಾಲೀಕರಿಗೆ ಜಿಲ್ಲಾ ಪೊಲೀಸರು ನೋಟೀಸ್ ಜಾರಿಮಾಡಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಈಗ ಏನನ್ನು ಹೇಳಲಾಗದು ಎಂದರು. ನೋಟೀಸ್ ಜಾರಿಗೊಳಿಸದ ಮೇಲೆ ಮಾಲೀಕರು ಬರದಿದ್ದರೆ ಮುಂದೆ ಏನು ಕ್ರಮಕೈಗೊಳ್ಳಬೇಕು ಅದನ್ನು ಸರಕಾರ ಚಿಂತನೆ ಮಾಡಲಿದೆ. ಮೈಸೂರು ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಜ್ಯುಬಿಲಿಯಂಟ್ ನೌಕರರದ್ದೇ ಜಾಸ್ತಿಯಾಗಿದೆ. ಹಾಗಾಗಿ,ರೆಡ್ ಜೋನ್ ಅಂಥ ಘೋಷಣೆ ಮಾಡಲಾಗಿದೆ. ಪಾಸಿಟಿವ್ ಸೊನ್ನೆಗೆ ತನಕ ಬರುವವರೆಗೂ ಕಾರ್ಖಾನೆ ಆರಂಭಿಸಲು ಅವಕಾಶ ಕೊಡಲ್ಲ ಎಂದು ಸ್ಪಷ್ಪಪಡಿಸಿದರು.
ಜನರು ಆತಂಕಗೊಳ್ಳದಂತೆ ಮಾಡಲು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಸಭೆ ನಡೆಸಿ ಜನರಿಗೆಧೈರ್ಯ ತುಂಬುತ್ತಿದ್ದೇನೆ. ನಂಜನಗೂಡು ಪಟ್ಟಣದ ಜನರು ಭಯ ಪಡುವ ಆತಂಕ ಇಲ್ಲ. ಸೊನ್ನೆಗೆ ಬಂದು ಎಲ್ಲ ತರಹದ ಪರೀಕ್ಷೆ ನಡೆಸಿ ವರದಿ ಬಂದ ಮೇಲಷ್ಟೇ ತೆರೆಯಲು ಅವಕಾಶ. ಇಲ್ಲದಿದ್ದರೆ ಇಲ್ಲವೇ ಇಲ್ಲ ಎಂದು ನುಡಿದರು.
ಹಾಲುವಿತರಣೆಗೆ ಕ್ರಮ: ಕಾಡಂಚಿನ ಗ್ರಾಮಗಳ ಕಾಡುಕುರುಬರು, ಜೇನುಕುರುಬರು, ಸೋಲಿಗರಿಗೆ ಹಾಲು ಪೂರೈಕೆಯಲ್ಲಿ ತೊಂದರೆಯಾಗಿದೆ ಎನ್ನುವ ದೂರು ಬಂದಿದ್ದರಿಂದ ಎಲ್ಲರಿಗೂ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೈಸೂರು,ಚಾಮರಾಜನಗರ, ದಕ್ಷಿಣಕನ್ನಡ ಭಾಗದ ಕಾಡಂಚಿನ ಗ್ರಾಮಗಳ ಜನರಿಗೆ ಹಾಲು ಪೂರೈಸಲು ಬೇಕಾದ ಕ್ರಮವಹಿಸುತ್ತೇವೆ. ಮೈಸೂರು ಜಿಲ್ಲೆಯ ಅರಣ್ಯದಂಚಿನ ಸೋಲಿಗರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಸಭೆಯಲ್ಲಿ ಶಾಸಕರಾದ ಬಿ.ಹರ್ಷವರ್ಧನ್, ಎಂ.ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇನ್ನಿತರರು ಇದ್ದರು.