ದಿಗಂತ ವರದಿ, ಪುತ್ತೂರು:
ಅವಿಭಜಿತ ದ.ಕ. ಜಿಲ್ಲೆಯ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರು ಬೋರ್ಡ್ ಹೈಸ್ಕೂಲ್ ಈಗಿನ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದ ಛಾವಣಿಯ ತುರ್ತು ದುರಸ್ಥಿಯ ಹಿನ್ನೆಲೆಯಲ್ಲಿ ಒಂದು ವಾರದಿಂದ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಕರಸೇವಾ ಸಪ್ತಾಹದಲ್ಲಿ ಶನಿವಾರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಸಹಿತ ನಗರಸಭಾ ಸದಸ್ಯರು ಪಾಲ್ಗೊಂಡರು.
ಪ್ರಮುಖ ವಿದ್ಯಾ ದೇಗುಲ: ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ 1916ರಲ್ಲಿ ಆರಂಭಗೊಂಡಿದೆ. ಪುತ್ತೂರು ಎಜ್ಯುಕೇಶನ್ ಸೊಸೈಟಿಯ ಪ್ರಥಮ ಸಂಸ್ಥೆ ಇದಾಗಿದ್ದು, ಸಹಕಾರಿ ಪಿತಾಮಹ ಕೀರ್ತಿಶೇಷ ಮೊಳಹಳ್ಳಿ ಶಿವರಾಯರಂತಹ ಗಣ್ಯರ ನೇತೃತ್ವದಲ್ಲಿ ಇದು ಆರಂಭಗೊಂಡಿತ್ತು. ತನ್ನ 104 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಪುತ್ತೂರು ನಗರ ಮಾತ್ರವಲ್ಲದೇ ತಾಲೂಕಿನ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯಾ ನಂತರ ಪ್ರೌಢ ಶಿಕ್ಷಣ ಪಡೆಯಲು ಈ ಶಾಲೆಯೊಂದೇ ಆಸರೆಯಾಗಿತ್ತು. ಪ್ರೌಢಶಾಲೆಯ ಹಳೆಯ ಕಟ್ಟಡ ಶಿಥಿಲವಾದ ಹಿನ್ನೆಲೆಯಲ್ಲಿ ಇಲ್ಲಿ ಹಿರಿಯ ವಿದ್ಯಾರ್ಥಿಗಳು ಜ. ೩ರಿಂದ ಕರಸೇವಾ ಸಪ್ತಾಹವನ್ನು ಆರಂಭಿಸಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹೆಸರಾಂತ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದರು.
25 ಲಕ್ಷ ರೂ. ಯೋಜನೆ
ಕಾಲೇಜಿನ ಹಳೆ ಕಟ್ಟಡ ಮೂಲರೂಪದಲ್ಲಿಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಈ ಕಟ್ಟಡವು ಪಾರಂಪರಿಕ ಕಟ್ಟಡವಾಗಿದೆ. ಇದರ ಅಭಿವೃದ್ಧಿಗಾಗಿ ರೂ. 25 ಲಕ್ಷವನ್ನು ಖರ್ಚು ಮಾಡಲಾಗುತ್ತದೆ. ಪ್ರಥಮ ಹಂತದಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ ರೀಪು, ಪಕ್ಕಾಸು, ಪೈಟಿಂಗ್, ವಿದ್ಯುದೀಕರಣವನ್ನು ಹಳೆ ಕಟ್ಟಡಕ್ಕೆ ಮಾಡಲಾಗುವುದು. ಹಳೆ ಕಟ್ಟಡದ ತರಗತಿ ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಪ ನೀಡಲಾಗುವುದು. ಇಲ್ಲಿಯ ವರೆಗೆ ಹಿರಿಯ ವಿದ್ಯಾರ್ಥಿಗಳು ರೂ. 8.50 ಲಕ್ಷ ದೇಣಿಗೆ ನೀಡಿದ್ದಾರೆ. ಇದರಲ್ಲಿ ರೂ. 1 ಲಕ್ಷವನ್ನು ಕೊಳವೆ ಬಾವಿಗಾಗಿ ನೀಡಲಾಗಿದೆ.
ನಿರ್ಮಾಣವಾಗಲಿವೆ 3 ಹೊಸ ಕೊಠಡಿಗಳು: ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಗಣಿತ ಶಿಕ್ಷಕಿ ದಿ. ಶಾಂತಾ ಶೆಟ್ಟಿ ಅವರು ತಾನು ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗೆ 3 ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡಲು ರೂ. 20 ಲಕ್ಷವನ್ನು ಈಗಾಗಲೇ ದೇಣಿಗೆ ನೀಡಿದ್ದಾರೆ. ಭಾನುವಾರದಂದು ಮೆಗಾ ಕರಸೇವೆ ನಡೆಯಲಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ತಿಳಿಸಿದ್ದಾರೆ. ಹಳೆಯ ಕಟ್ಟಡಕ್ಕೆ ಹೊಸ ರೂಪ ನೀಡಲು ವಸ್ತು ರೂಪದಲ್ಲಿಯೂ ದೇಣಿಗೆ ನೀಡಲಾಗಿದೆ.
ಪ್ರಮುಖ ಹಿರಿಯ ವಿದ್ಯಾರ್ಥಿಗಳು: ಪುತ್ತೂರು ನಗರದ ಕೊಂಬೆಟ್ಟು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಲ್ಲಿ ಹಾಲಿ ಪುತ್ತೂರಿನ ಜನಪ್ರತಿನಿಧಿಗಳು ಕೂಡಾ ಸೇರಿದ್ದಾರೆ.
ಹೆಚ್ಚಿನ ಮಂದಿ ಇಲ್ಲಿನ ಹಳೆ ವಿದ್ಯಾರ್ಥಿಗಳು: ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಪುತ್ತೂರು ಪುರಸಭೆ ಮತ್ತು ನಗರಸಭೆಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದ್ದಾರೆ. ಹಾಲಿ ಪುತ್ತೂರು ನಗರಸಭೆಯಲ್ಲಿರುವ 31 ಸದಸ್ಯರಲ್ಲಿ 29 ಮಂದಿ ಪುತ್ತೂರು ಬೋರ್ಡ್ ಹೈಸ್ಕೂಲ್ನ ಹಿರಿಯ ವಿದ್ಯಾರ್ಥಿಗಳಾಗಿದ್ದಾರೆ.
ಶಾಸಕರು ಪರೀಕ್ಷೆ ಬರೆದ ಶಾಲೆ: ಪುತ್ತೂರು ಶಾಸಕ ಸಂಜೀವ ಮಠಂದೂರು ತನ್ನ ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದವರಾದರೂ 1978ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಅವರು ಪುತ್ತೂರು ಕೊಂಬೆಟ್ಟು ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದರು. ಆಗ ಉಪ್ಪಿನಂಗಡಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರ ಇರಲಿಲ್ಲ. ಪುತ್ತೂರು ಶಾಸಕ ಮಠಂದೂರಿಗೂ ಕೊಂಬೆಟ್ಟು ಶಾಲೆಗೂ ಒಂದು ರೀತಿಯಲ್ಲಿ ಶೈಕ್ಷಣಿಕ ಸಂಬಂಧವಿದೆ. ಈಗ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದ ಪೂರ್ವಭಾವಿ ಸಭೆಯು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದಿತ್ತು.
ಊಟ-ಉಪಹಾರ: ಕಳೆದ ಭಾನುವಾರದಿಂದ ಶನಿವಾರದ ವರೆಗೆ ಒಟ್ಟು 1,100 ಮಂದಿ ಕರಸೇವೆಯಲ್ಲಿ ತೊಡಗಿದ್ದಾರೆ. ಕರಸೇವಕರಿಗೆ ಬೆಳಗಿನ ಕಾಫಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ ನೀಡಲಾಗುತ್ತಿದೆ. ಅಡುಗೆ ತಯಾರಿಕೆಗಾಗಿ ನುರಿತ ಬಾಣಸಿಗರನ್ನು ನಿಯೋಜಿಸಲಾಗಿದೆ. ಶಾಲಾ ಶಿಕ್ಷಕಿಯರು ಊಟ-ಉಪಹಾರದ ಉಸ್ತುವಾರಿಯನ್ನು ನೋಡಿ ಕೊಳ್ಳುತ್ತಿದ್ದಾರೆ. ಶಾಲಾ ಉಪಪ್ರಾಂಶುಪಾಲರಿಂದ ತೊಡಗಿ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬಂದಿಗಳು ಕರಸೇವೆಯ ಸಂದರ್ಭದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಕಿ ಗೀತಾಮಣಿ ಹೇಳಿದರು.
ಐತಿಹಾಸಿಕ ಶಿಕ್ಷಣ ಸಂಸ್ಥೆ: ಈ ಪದವಿ ಪೂರ್ವ ಕಾಲೇಜು ಶತಮಾನ ಕಂಡ ಐತಿಹಾಸಿಕ ಶಿಕ್ಷಣ ಸಂಸ್ಥೆಯಾಗಿದೆ. ಪುತ್ತೂರು ನಗರವೂ ಸೇರಿದಂತೆ ತಾಲೂಕಿನ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಸಂಸ್ಥೆ ವಿದ್ಯಾದಾನ ಮಾಡಿದೆ. ಇದರ ಪುನರುತ್ಥಾನ ಕಾರ್ಯದಲ್ಲಿ ಭಾಗಿಯಾಗುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ನನ್ನಂತಹ ಹಲವರನ್ನು ರೂಪಿಸಿದ ಶಿಕ್ಷಣ ಸಂಸ್ಥೆ ಇದಾಗಿದೆ ಎಂದು ಪುತ್ತೂರು ನಗರಸಭೆಯ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ.