ಮಂಗಳೂರು: ಕೇರಳದಲ್ಲಿ ಲಾಕ್ಡೌನ್ ಬಿಗಿಗೊಳಿಸಿದ ಪರಿಣಾಮ ಕೊರೋನಾ ಪ್ರಕರಣಗಳು ಸಹಜವಾಗಿಯೇ ನಿಯಂತ್ರಣಕ್ಕೆ ಬಂದಿವೆ. ಕಾಸರಗೋಡಿನಲ್ಲೂ ಕಠಿಣ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದರಿಂದ ಸದ್ಯ ಜಿಲ್ಲೆ ಗ್ರೀನ್ ಝೋನ್ನತ್ತ ತೆರಳುತ್ತಿದೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್
ಕೇರಳದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕೂಡ ಮೇ೧೦ರ ಭಾನುವಾರ ಸಂಪೂರ್ಣ ಬಂದ್ ಆಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಯಾವುದೇ ವಾಹನಗಳು ಕೂಡ ರಸ್ತೆಗಿಳಿದಿರಲಿಲ್ಲ. ಅದೇ ರೀತಿ ಮೇ೧೭ರಂದು ಅಂದರೆ ಮುಂದಿನ ಭಾನುವಾರ ಕೂಡ ಕಾಸರಗೋಡು ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ
ಕಾಸರಗೋಡು ಇನ್ನು ಮುಂದೆ ಗ್ರೀನ್ ಝೋನ್
ರೆಡ್ ಝೋನ್ಲ್ಲಿದ್ದ ಕಾಸರಗೋಡು ಇನ್ನು ಮುಂದೆ ಗ್ರೀನ್ ಝೋನ್ ಆಗಿ ಮಾರ್ಪಡಲಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಾಗಿದ್ದ ೧೭೮ ಮಂದಿಯೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುವುದರಿಂದ ಜಿಲ್ಲಾಡಳಿತ ನೆಮ್ಮದಿಯ ಉಸಿರುಬಿಡುವಂತಾಗಿದೆ.