Wednesday, July 6, 2022

Latest Posts

ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ನೀಡುವ ಅಧಿಕಾರ ಪಿಡಿಒ ಗಳಿಗೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಜನನ ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದುವರೆಗೆ ರಾಜ್ಯದಲ್ಲಿ ಜನನ-ಮರಣ ಪ್ರಮಾಣ ಪತ್ರವನ್ನು ಆಯಾ ಆಸ್ಪತ್ರೆ, ಪಾಲಿಗೆ, ನಗರ ಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮಾತ್ರವೇ ನೀಡಲಾಗುತ್ತಿತ್ತು. ಇನ್ಮುಂದೆ ಗ್ರಾಮ ಪಂಚಾಯ್ತಿಗಳಲ್ಲಿಯೂ ಜನನ-ಮರಣ ಪ್ರಮಾಣ ಪತ್ರ ಸಿಗಲಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿಯ ಸಿಇಓ, ತಾಲೂಕು ಪಂಚಾಯ್ತಿಯ ಇಓ ಮತ್ತು ಎಲ್ಲಾ ಪಂಚಾಯ್ತಿಗಳ ಆಡಳಿತಾಧಿಕಾರಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅರೆ ಸರ್ಕಾರಿ ಪತ್ರದ ಅನುಸಾರವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು(ಪಿಡಿಓ) ಜನನ-ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಯನ್ನಾಗಿ ನೇಮಿಸಬಹುದಾಗಿದೆ ಎಂದು ತಿಳಿಸಿರುವುದರಿಂದ ಹಾಗೂ ಸದರಿ ಪತ್ರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಜನನ-ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಿಸಲು ಅನುಮತಿ ನೀಡಿರುವದರಿಂದ, ರಾಷ್ಟ್ರೀಯ ಜನನ-ಮರಣ ಕಾಯ್ದೆ 1969ರ ಅಧ್ಯಾಯ 5ರ ಪ್ರಕರಣ 27ರ ಅಡಿ ಗ್ರಾಮ ಪಂಚಾಯ್ತಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ತಮ್ಮ ಡಿಜಿಟಲ್ ಸಹಿಯ ಮುಖಾಂತರ ವ್ಯಕ್ತಿಗಳ ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ನೇಮಿಸಿ ಆದೇಶಿಸಿದೆ.
ಗ್ರಾಮ ಪಂಚಾಯ್ತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಈ ಸೇವೆಯನ್ನು ನೀಡುವುದು. ಸರ್ಕಾರವು ಆಗಿಂದಾಗ್ಗೆ ನಿಗಧಿಪಡಿಸಿರುವ ದರಗಳನ್ವಯ ಸೇವಾ ಶುಲ್ಕವನ್ನು ಸಂಗ್ರಹಿಸಿ, ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವುದಾಗಿ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss