ಮಂಗಳೂರು: ಸಂಚಾರ ನಿಯಮೋಲ್ಲಂಘಕರಿನ್ನು ಸಣ್ಣ ಪುಟ್ಟ ಅಪರಾಧಗಳಿಗೂ ನ್ಯಾಯಾಧೀಶರ ಸಮಕ್ಷಮ ಹಾಜರಾಗಬೇಕಿಲ್ಲ. ಯಾವುದೇ ಹಳ್ಳಿಯಲ್ಲಿದ್ದರೂ ವರ್ಚ್ವಲ್ ಕೋರ್ಟ್(VIRTUAL COURT) ಗೆ ಯಾವುದೇ ಹೊತ್ತಲ್ಲೂ ಲಾಗ್ ಇನ್ ಮಾಡಿ, ತಪ್ಪೊಪ್ಪಿಕೊಳ್ಳಬಹುದು ಮತ್ತು ಆನ್ಲೈನ್ ಮೂಲಕ ದಂಡ ಪಾವತಿಸಿ, ಪ್ರಕರಣವನ್ನು ಇತ್ಯರ್ಥಪಡಿಸುವಂತೆ ನ್ಯಾಯಾಧೀಶರನ್ನು ವಿನಂತಿಸಬಹುದು.
ವರ್ಚ್ವಲ್ ಕೋರ್ಟ್ ಸಿಸ್ಟಮ್ನಡಿ ಈ ತೆರ ಅವಕಾಶ ಲಭ್ಯವಿದೆ.
ಆಧುನಿಕ ತಂತ್ರಜ್ಞಾನ ಬಳಸಿ ಪ್ರಕರಣಗಳನ್ನು ತ್ವರಿತ ಇತ್ಯರ್ಥಪಡಿಸುವನ್ವಯ ಕರ್ನಾಟಕ ಉಚ್ಚ ನ್ಯಾಯಾಲಯ ಚಾಲ್ತಿಗೆ ತಂದಿರುವ ಆರು ಇ-ಸರ್ವಿಸ್ಗಳ ಪೈಕಿ ಇದೂ ಒಂದು. ಇಲೆಕ್ಟ್ರಾನಿಕ್ ವಿಧಾನದಲ್ಲಿ ಹೈಕೋರ್ಟ್ ಮತ್ತು ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಕೇಸುಗಳ ದಾಖಲಾತಿ, ಕೋರ್ಟ್ ಆದೇಶಗಳ ಪ್ರತಿ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು, ಆನ್ಲೈನ್ನಲ್ಲೇ ಕೋರ್ಟ್ ಶುಲ್ಕ ಪಾವತಿ, ರಾಜ್ಯದಲ್ಲಿನ ಕಮರ್ಶಿಯಲ್ ಕೋರ್ಟ್ಗಳಿಗೇ ಸಮರ್ಪಿತ ವೆಬ್ಸೈಟ್ ಇವು ಹೈಕೋರ್ಟ್ ಜಾರಿ ಮಾಡಿರುವ ಇತರ ಇ-ಸರ್ವಿಸ್ಗಳಾಗಿವೆ.
ದಿಲ್ಲಿ, ಚೆನ್ನೈ, ಪೂನಾ, ಕೊಚ್ಚಿ ಮತ್ತು ಫರೀದಾಬಾದ್ಗಳಲ್ಲಿನ ವರ್ಚ್ವಲ್ ನ್ಯಾಯಾಲಯಗಳ ಮುಖಾಂತರ ಇದುವರೆಗೆ ಬರೋಬ್ಬರಿ ೧೫.೧೯ಲಕ್ಷ ಸಂಚಾರ ನಿಯಮೋಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಬರೇ ೪೯೦೦೦ ಕಕ್ಷಿದಾರರಷ್ಟೆ ಪ್ರಕರಣಗಳ ಇತ್ಯರ್ಥಕ್ಕಾಗಿ ನ್ಯಾಯಾಲಯಕ್ಕೆ ನೇರ ಅರ್ಜಿ ಸಲ್ಲಿಸಿದ್ದಾರೆ ಎಂದು ಇ-ಕೋರ್ಟ್ಗಳ ಸಮಿತಿ ಅಧ್ಯಕ್ಷರಾದ ನ್ಯಾ.ಡಿ.ವೈ.ಚಂದ್ರಚೂಡ್, ಇ.ಸೇವೆಗಳಿಗೆ ಚಾಲನೆ ನೀಡುವ ಸಂದರ್ಭ ಮಾಹಿತಿ ನೀಡಿದ್ದಾರೆ.
ವರ್ಚ್ವಲ್ ಕೋರ್ಟ್ಗಳ ಬಗ್ಗೆ ಮಾಹಿತಿರಹಿತ ಅಟೋ ಚಾಲಕರು, ಟ್ರಕ್-ಕ್ಯಾಬ್ ಚಾಲಕರು ಮತ್ತು ವಕೀಲರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ೩,೩೦೦ ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಇ-ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ತಾಂತ್ರಿಕತೆ ಬಳಕೆ ಬಗ್ಗೆ ವಕೀಲರ ಸಹಿತ ಕಕ್ಷಿದಾರರಿಗೆ ಮಾಹಿತಿ ನೀಡುವನ್ವಯ ೨೨ಭಾಷೆಗಳಲ್ಲಿ ಟ್ರೈನಿಂಗ್ಮೊಡ್ಯೂಲ್ನ್ನೂ ಇ-ಸಮಿತಿ ತಯಾರಿಸಿದೆ ಎಂದು ಚಂದ್ರಚೂಡ್ ಮಾಹಿತಿ ನೀಡಿದರು.