ಹೊಸದಿಗಂತ ವರದಿ, ಕೊಪ್ಪಳ:
ವಿವಿಧ ಅಪರಾಧದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಇಬ್ಬರು ಜೂಜುಕೋರರನ್ನೂ ಪೊಲೀಸ್ ಇಲಾಖೆ ವರದಿ ಆಧರಿಸಿ ಕೊಪ್ಪಳ ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು 6 ತಿಂಗಳ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಗಿನ ಓಣಿಯ ನಿವಾಸಿ ಯಮನೂರು ಸಿಂಧನೂರು, ಇನ್ನೋರ್ವ ಕಟ್ಟಿ ಗ್ರಾಮದ ನಸರಪ್ಪ ನೇಕಾರ ಎನ್ನುವ ಈ ಇಬ್ಬರು ಗಡಿಪಾರು ಶಿಕ್ಷೆಗೆ ಒಳಗಾದವರು.
ಇವರಿಬ್ಬರೂ ಪ್ರತ್ಯೇಕವಾಗಿ ಜನರಿಗೆ ಮೋಸ ಮಾಡಲು ಜೂಜಾಟ ನಡೆಸುವುದು, ಮಟ್ಕಾ ಆಟ ಆಡಿಸಿ ಜನರಿಂದ ದುಡ್ಡು ಪಡೆಯುವುದು ಸೇರಿ ಬಡ ಜನರ ಜೀವದ ಜೊತೆ ಆಟವಾಡುತ್ತಿದ್ದು ಈ ಇಬ್ಬರ ಮೇಲೂ ಪೊಲೀಸ್ ಠಾಣೆಯಲ್ಲಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸ್ ಇಲಾಖೆ ಇಬ್ಬರ ವರದಿಯನ್ನು ಎಸಿ ಅವರಿಗೆ ಸಲ್ಲಿಸಿತ್ತು. ವರದಿ ಪರಿಶೀಲಿಸಿದ ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು 6 ತಿಂಗಳ ಗಡಿಪಾರಿಗೆ ಆದೇಶ ಮಾಡಿದ್ದಾರೆ. ಯಮನೂರ ಸಿಂಧನೂರು ಎಂಬ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆಗೆ ಹಾಗೂ ನರಸಪ್ಪ ನೇಕಾರ ಎಂಬ ವ್ಯಕ್ತಿಯನ್ನ ಕೋಲಾರ ಜಿಲ್ಲೆಗೆ 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.