Tuesday, July 5, 2022

Latest Posts

ಇಲಾಖೆ ಸೂಚನೆಯಂತೆ ಜೂ.8ರಿಂದ ಶೈಕ್ಷಣಿಕ ಚಟುವಟಿಕೆ: ಗ್ರಾಮೀಣ ಪ್ರದೇಶಗಳಿಗೆ ಬಸ್ಸುಗಳಿಲ್ಲದೇ ಶಿಕ್ಷಕರ ಪರದಾಟ!

ಕೋಲಾರ: ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಹೊರಟ ಶಿಕ್ಷಕರಿಗೆ ಗ್ರಾಮೀಣ ಶಾಲೆಗಳಿಗೆ ತೆರಳಲು ಬಸ್ಸುಗಳಿಲ್ಲದೇ ಪರದಾಡಬೇಕಾದ ದುಸ್ಥಿತಿ ಎದುರಾಯಿತು. ಸೋಮವಾರದಿಂದ ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆಗಳಿಗೆ ಶಿಕ್ಷಕರು ಹಾಜರಾಗಬೇಕಾಗಿದ್ದು, ಇಂದು ಅನೇಕ ಶಿಕ್ಷಕರು ಬಸ್ಸಿಗಾಗಿ ಬಸ್‌ನಿಲ್ದಾಣದತ್ತ ಧಾವಿಸಿದರು ಆದರೆ ನಿಲ್ದಾಣದಲ್ಲಿ ಬಸ್ಸುಗಳಿಲ್ಲದೇ ಪರದಾಡಿದ ಶಿಕ್ಷಕರು ಸಾರಿಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಗ್ರಾಮೀಣ ಭಾಗಗಳಿಗೆ ಬಸ್ಸು ಕಳುಹಿಸಲು ನಮಗೆ ಆದೇಶ ಬಂದಿಲ್ಲ ಎಂಬ ಉತ್ತರ ಸಿಕ್ಕಿತು.
ಬೆಳಗ್ಗೆ 8.30ಕ್ಕೆ ಬಸ್ ನಿಲ್ದಾಣಕ್ಕೆ ಬಂದ ಸುಮಾರು ೬೦ ಕ್ಕೂ ಹೆಚ್ಚು ಶಿಕ್ಷಕರಿಗೆ ತಾವು ಕರ್ತವ್ಯ ನಿರ್ವಹಿಸುವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲದಿರುವುದನ್ನು ಅಧಿಕಾರಿಗಳಿಂದ ತಿಳಿದುಕೊಂಡು, ಗೊಂದಲಕ್ಕೆ ಒಳಗಾಗುವಂತಾಯಿತು.
ತಾಲೂಕು ಕೇಂದ್ರಗಳನ್ನು ಹೊರತುಪಡಿಸಿ ಹೋಬಳಿ ಮತ್ತು ಗ್ರಾಮೀಣ ಮಾರ್ಗಗಳಿಗೆ ತೆರಳುತ್ತಿದ್ದ ಬಸ್‌ಗಳ ಸೇವೆ ಇನ್ನೂ ಆರಂಭಗೊಳ್ಳದ ಕಾರಣ ತಾವು ಆ ಭಾಗದ ಗ್ರಾಮಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅರಿತು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದರು.
ಶಿಕ್ಷಕರ ಸಂಘದಿಂದ ಡಿಸಿಗೂ ಮನವಿ
ಶಿಕ್ಷಕರ ಸಮಸ್ಯೆ ಕೇಳಿ  ಬಸ್ ನಿಲ್ದಾಣಕ್ಕಾಗಮಿಸಿದ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ
ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ ಮತ್ತಿತರರು
ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಹೋಬಳಿ, ಹಳ್ಳಿ ಭಾಗದ ಬಸ್
ಮಾರ್ಗಗಳಲ್ಲಿ ೫ ರಿಂದ ೬ ಮಂದಿಯೂ ಪ್ರಯಾಣಿಸುವುದಿಲ್ಲ. ಹಾಗಾಗಿ ಇನ್ನೂ
ಸಹ ಬಸ್ ಸೇವೆ ಕಲ್ಪಿಸಿಲ್ಲ. ನಮ್ಮ ಹಿರಿಯ ಅಧಿಕಾರಿಗಳು ಸೂಚನೆ ನೀಡಿದರೆ
ಆರಂಭಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಹಾಗೂ ಸಾರಿಗೆ ಸಂಸ್ಥೆ ಡಿಸಿಯವರನ್ನು ಸಂಪರ್ಕಿಸಿದ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್, ಇಲಾಖೆಯ ಆಯುಕ್ತರು ಸಾರಿಗೆ ಸಂಸ್ಥೆ ಎಂಡಿ ಅವರಿಗೆ ಗ್ರಾಮೀಣ ಭಾಗಗಳಿಗೆ ಬಸ್ ಕಳುಹಿಸಲು ಕೋರಿರುವ ಪತ್ರವನ್ನು ತೋರಿಸಿದರೂ ಅಧಿಕಾರಿಗಳು ನಮಗೆ ಸಾರಿಗೆ ಸಂಸ್ಥೆ ರಾಜ್ಯಮಟ್ಟದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಉತ್ತರಿಸಿ ಸುಮ್ಮನಾದರು.
ಅನೇಕ ಶಿಕ್ಷಕರು ಮುಖ್ಯ ರಸ್ತೆಯಲ್ಲಿ ತೆರಳುವ ಬಸ್‌ಗಳಲ್ಲಿ ತೆರಳಿದರು, ಕೆಲವು ಪುರುಷ ಶಿಕ್ಷಕರು ದ್ವಿಚಕ್ರವಾಹನದಲ್ಲಿ ಹೋದರೆ ಮಹಿಳಾ ಶಿಕ್ಷಕರು, ವಿಕಲಚೇತನರು ಪರ್ಯಾಯ ವ್ಯವಸ್ಥೆಯಿಲ್ಲದೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಮನೆಗಳಿಗೆ ವಾಪಸ್ಸಾದರು.
ಈ ವೇಳೆ ಮಾತನಾಡಿದ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್,
ಶೇ.೭೦ರಷ್ಟು ಶಿಕ್ಷಕರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದು, ಬಹಳಷ್ಟು ಮಂದಿ ಶಿಕ್ಷಕರು ಬಸ್‌ಗಳಲ್ಲಿ ತೆರಳುತ್ತಿದ್ದರು. ಇದೀಗ ತಾಲೂಕು ಕೇಂದ್ರಗಳು ಹೊರತುಪಡಿಸಿ ಹೋಬಳಿ, ಗ್ರಾಮೀಣ ಭಾಗಕ್ಕೆ ಬಸ್ ಇಲ್ಲದಿರುವುದರಿಂದ ಶಾಲೆಗಳಿಗೆ ತೆರಳಲು ತೊಂದರೆಯಾಗಿದೆ ಎಂದರು.
ಸಮಸ್ಯೆಯ ಬಗ್ಗೆ ಡಿಡಿಪಿಐ ಅವರ ಗಮನಕ್ಕೆ ತಂದಿದ್ದು, ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಕೂಡಲೇ ಬಸ್ ವ್ಯವಸ್ಥೆಯನ್ನು ಕಲ್ಪಿಸಿದರೆ ಶಿಕ್ಷಕರು ತಮ್ಮ ಕರ್ತವ್ಯ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಶಿಕ್ಷಕರಾದ ಇಂದಿರಮ್ಮ, ಪದ್ಮಾವತಿ, ಮಂಜುಳ, ನಾರಾಯಣಮ್ಮ, ಫರೀಧಾ ಬೇಗಂ, ನಾಜ್ಮಿ ಖಾನಂ, ಹೀನಾ, ಸಯೀದಾ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss