ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಂಗಳವಾರ ಇಸ್ರೇಲ್ ಸರ್ಕಾರ ಪತನಗೊಂಡಿದ್ದು, ಮತ್ತೊಮ್ಮೆ ಅವಧಿಗೂ ಮುನ್ನ ಚುನಾವಣೆ ಎದುರಾಗಿದೆ.
ಇಸ್ರೇಲ್’ನಲ್ಲಿ ಕಳೆದ ಎರಡು ವರ್ಷಗಳಲ್ಲಿ 4ನೇ ಸಲ ಚುನಾವಣೆ ನಡೆಯುತ್ತಿದೆ. ಬೆಂಜಮಿನ್ ನೆತನ್ಯಾಹು 7 ತಿಂಗಳ ಹಿಂದೆ ಬೆನ್ನಿಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ಆದರೆ ಇದೀಗ ಮಂಗಳವಾರ ಮಧ್ಯರಾತ್ರಿಯಲ್ಲಿ ಇಸ್ರೇಲ್ ಸಂಸತ್ತು ತಾನಾಗಿಯೇ ವಿಸರ್ಜನೆಗೊಂಡಿತು.
ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ ಮತ್ತು ಗಾಂಟ್ಜ್ ನೇತೃತ್ವದ ಬ್ಲೂ ಆಯಂಡ್ ವೈಟ್ ಪಾರ್ಟಿ ಮೈತ್ರಿ ಸರ್ಕಾರವು ಕಿತ್ತಾಟದಿಂದಲೇ ಕೊನೆಯಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದ್ದು, 2021 ಮಾರ್ಚ್ 23ಕ್ಕೆ ಮತದಾನ ನಿಗದಿಯಾಗಿದೆ.
ಪ್ರಸ್ತುತ ಅನಗತ್ಯವಾಗಿರುವ ಚುನಾವಣೆಯನ್ನು ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಮಾರ್ಗ ಕಂಡುಕೊಳ್ಳಬೇಕಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೂ ಇದೇ ಸರ್ಕಾರವೇ ದೇಶವನ್ನು ಮುನ್ನಡೆಸಲಿದೆ ಎಂದು ನೆತನ್ಯಾಹು ಮಂಗಳವಾರ ಸಂಸತ್ತಿನಲ್ಲಿ ಹೇಳಿದ್ದಾರೆ.