ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ಗೆ ಇಂದು 40ನೇ ಹುಟ್ಟುಹಬ್ಬದ ಸಂತಸ. ಕೊರೋನಾ ವೇಳೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಗಣೇಶ್ ತಮ್ಮ ಅಭಿಮಾನಿಗಳಿಗೆ ಈ ಹಿಂದೆಯೇ ಮನವಿ ಮಾಡಿದ್ದರು.
ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಗೋಲ್ಡನ್ಸ್ಟಾರ್ಗೆ ಶುಭಾಶಯಗಳು ಕೋರುತ್ತಿದ್ದಾರೆ. ಮತ್ತೊಂದೆಡೆ ಗಣೇಶ್ ಹುಟ್ಟುಹಬ್ಬಕ್ಕೆ ನಿರ್ದೇಶಕ ಸಿಂಪಲ್ ಸುನಿ ಡಬಲ್ ಗಿಫ್ಟ್ ನೀಡಿದ್ದಾರೆ. ಸುನಿ ನೀಡಿರುವ ಉಡುಗೊರೆಗೆ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ನಟ ಗಣೇಶ್ ಅವರು ಸಿಂಪಲ್ ಸುನಿ ಅವರ ದಿ ಸ್ಟೋರಿ ಆಫ್ ರಾಯಗಢ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿದೆ. ಆ ಮೂಲಕ ಸಿಂಪಲ್ ಸುನಿ ಗಣೇಶ್ ಅವರಿಗೆ ಸರ್ಪ್ರೈಸ್ ನೀಡಿದ್ದರು.ಈ ಸಿನಿಮಾವನ್ನು ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಜುಲೈ 1 ರಂದು ಸಂಜೆ ರ್ಯಾಪ್ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮತ್ತೊಂದು ಸರ್ಪ್ರೈಸ್ ನೀಡಿದೆ. ಸಿಂಪಲ್ ಸುನಿ ಕಡೆಯಿಂದ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಡಬಲ್ ಗಿಫ್ಟ್ ಸಿಕ್ಕಂತಾಗಿದೆ.
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗಣೇಶ ಈ ವರ್ಷ ಎಂದಿನಂತಿಲ್ಲ. ಕೊರೊನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಬಡ ಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ.
ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ. ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು, ಅದೇ ದಿನ ಬಡ ಕುಟುಂಬಗಳಿಗೆ ಸಹಾಯಹಸ್ತ ನೀಡಿ, ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ.
ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು ಗೋಲ್ಡನ್ ಸ್ಟಾರ್ ಗಣೇಶ್.