ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿ ಪ್ರದೇಶಗಳಲ್ಲಿ 44 ಸೇತುವೆಗಳನ್ನು ಉದ್ಘಾಟಿಸಿದ ಬೆನ್ನಲೇ ಚೀನಾ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ವಿರುದ್ಧ ತನ್ನ ಸಿಟ್ಟನ್ನು ತೋರ್ಪಡಿಸಿದೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶ ಭಾರತದಲ್ಲಿರುವುದು ಅಕ್ರಮ. ಇದನ್ನು ನಾವು ಒಪ್ಪುವುದಿಲ್ಲ. ಈ ವಿವಾದಾತ್ಮಕ ಪ್ರದೇಶಗಳಲ್ಲಿ ಮಿಲಿಟರಿ ಉದ್ದೇಶಕ್ಕಾಗಿ ಯಾವುದೇ ಸೌಕರ್ಯ ನಿರ್ಮಿಸುವುದಕ್ಕೂ ತಮ್ಮ ವಿರೋಧ ಇದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ ಎಂದು ಚೀನಾದ ಸರ್ಕಾರ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಎಲ್ಎಸಿಉದ್ದಕ್ಕೂ ಭಾರತ ಮೂಲಸೌಕರ್ಯ ಕಾರ್ಯಗಳನ್ನು ಚುರುಕುಗೊಳಿಸುವುದೇ ಎರಡು ನೆರೆಹೊರೆಯವರ ನಡುವಿನ ವಿವಾದದ ಹಿಂದಿನ ಕಾರಣವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವರು ಆರೋಪಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ವಿವಾದ ಸಂಕೀರ್ಣಗೊಳ್ಳುವಂಥ ಯಾವುದೇ ಕ್ರಮವನ್ನು ಎರಡೂ ಕಡೆಯವರೂ ತೆಗೆದುಕೊಳ್ಳಬಾರದು ಎಂದು ಇತ್ತೀಚಿನ ಮಾತುಕತೆಗಳಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೂ ಕೂಡ ವಿವಾದಿತ ಗಡಿಭಾಗದಲ್ಲಿ ಸೇನಾ ಬಳಕೆ ಉದ್ದೇಶದಿಂದ ಭಾರತ ಸೌಕರ್ಯಗಳನ್ನ ಮಾಡಿಕೊಳ್ಳುತ್ತಿದೆ. ವಿವಾದಿತ ಪ್ರದೇಶಗಳಲ್ಲಿ ಸೇನಾ ನಿಯೋಜನೆ ಹೆಚ್ಚಿಸುತ್ತಿದೆ ಎಂದು ಝಾವೋ ಹೇಳಿರುವುದು ವರದಿಯಾಗಿದೆ.
ಭಾರತ ತನ್ನ ಗಡಿಭಾಗಗಳಲ್ಲಿ ಮೂಲಸೌಕರ್ಯಗಳನ್ನ ಹೆಚ್ಚಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದೆ. ಅದರ ಭಾಗವಾಗಿ ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತ 45 ಸೇತುವೆಗಳನ್ನ ನಿರ್ಮಿಸಿದೆ. ಇದರಿಂದ ಸೇನಾ ಪಡೆಗಳ ಸಾಗಾಟಕ್ಕೆ ಬಹಳ ಅನುಕೂಲ ಮಾಡಿಕೊಡಲಿವೆ. ಹಾಗೆಯೇ, ಹಿಮಾಚಲ ಪ್ರದೇಶದ ಡಾರ್ಚಾದಿಂದ ಲಡಾಖ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. 290 ಕಿಮೀ ಉದ್ದದ ಈ ರಸ್ತೆ ಲಡಾಖ್ನ ಸೇನಾ ನೆಲೆಗಳಿಗೆ ಸೈನಿಕರು ಮತ್ತು ಶಸ್ತ್ರಾಸ್ತ್ರಗಳ ಸಾಗಾಟಕ್ಕೆ ಬಹಳ ಸಹಾಯವಾಗುತ್ತದೆ. ಆದರೆ ಭಾರತದ ಅಭಿವೃದ್ಧಿ ಕೆಲಸಗಳು ಚೀನಾದ ನಿದ್ದೆಗೆಡಿಸುತ್ತಿದೆ.