ಹೊಸದಿಗಂತ ಆನ್ಲೈನ್ ಡೆಸ್ಕ್:
ಚಳಿ ಶುರುವಾದರೆ ಸಾಕು, ಬೆಚ್ಚಗಿನ ಹೊದಿಕೆ ಹೊದ್ದು ಮುಸುಕು ಎಳೆದುಕೊಳ್ಳುವವರೇ ಹೆಚ್ಚ್ಚಿನವರು. ಆದರೆ ಇಲ್ಲೊಬ್ಬ ಮೈ ತುಂಬಾ ಐಸ್ ಹೊದ್ದುಕೊಂಡು ತಾಸುಗಟ್ಟಲೆ ಕುಳಿತು ದಾಖಲೆ ಬರೆದಿದ್ದಾನೆ!
ಫ್ರಾನ್ಸ್ನ ರೋಮನ್ ವಂಡೆಂಡೋರ್ಪ್ ಎಂಬಾತ ಸುಮ್ಮನೆ ಈ ದಾಖಲೆ ಮಾಡಿಲ್ಲ, ಬದಲಿಗೆ ಕ್ಯಾನ್ಸರ್ ಬಾಧಿತರ ನೆರವಿಗಾಗಿ ಜೀವವನ್ನೇ ಪಣವಾಗಿಟ್ಟಿದ್ದಾನೆ ಈತ.
ಕೆಲ ವರ್ಷಗಳ ಹಿಂದೆ ಅಗಸ್ಟೀನ್ ಹೆಸರಿನ ಬಾಲಕಿಯನ್ನು ಭೇಟಿಯಾಗಿದ್ದ ಸಂದರ್ಭ, ಆ ಬಾಲಕಿ ಕ್ಯಾನ್ಸರ್ನಿಂದ ಬಳಲುತ್ತಿರುವುದು ವಂಡೆಂಡೋರ್ಪ್ಗೆ ಗೊತ್ತಾಗಿತ್ತು. ಮುಂದಿನ ಎರಡು ವರ್ಷದಲ್ಲಿ ಆಕೆ ಸಾವನ್ನಪ್ಪಿದ್ದಳು. ಈ ಘಟನೆ ವಂಡೆಂಡೋರ್ಪ್ ಮನಸ್ಸಿಗೆ ಬಲವಾಗಿಯೇ ತಟ್ಟಿದೆ. ಮುಂದೆ ಆ ಬಾಲಕಿಯ ನೆನಪಿನಲ್ಲೇ ವಂಡರ್ ಅಗಸ್ಟೀನ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕ್ಯಾನ್ಸರ್ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲು ಈ ಸಂಸ್ಥೆ ನೆರವಾಗುತ್ತಿದೆ. ಈ ಸಂಸ್ಥೆಗೆ ನೆರವಾಗುವ ಸಲುವಾಗಿಯೇ ವಂಡೆಂಡೋರ್ಪ್ ಐಸ್ನಲ್ಲಿ ಕುಳಿತಿದ್ದಾನೆ. ದಾಖಲೆ ಮಾಡಿದ್ದರಿಂದಾಗಿ ಬಂದ ಹಣವನ್ನು ಈ ಸಂಸ್ಥೆಗೆ ನೀಡುವುದಾಗಿ ಆತ ತಿಳಿಸಿದ್ದಾನೆ.