ಹೊಸದಿಲ್ಲಿ: ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದು ಕೆ.ಜಿಗೆ 49 ರಿಂದ 58 ರೂ. ದರದಲ್ಲಿ ಈರುಳ್ಳಿ ವಿತರಿಸಲು ಮುಂದಾಗಿದೆ.
ಹಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಸದ್ಯ ಒಂದು ಕೆ.ಜಿಗೆ 70 ರಿಂದ 150 ರೂ.ಗಳ ಆಸುಪಾಸಿನಲ್ಲಿಯೇ ಮಾರಾಟವಾಗುತ್ತಿದೆ.
ಈರುಳ್ಳಿ ಬೆಲೆ ಏರಿಕೆ ಕಡಿಮೆಗೊಳಿಸಲು ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದ್ದು, ಒಂದು ತಿಂಗಳಿನಿಂದ ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಈರುಳ್ಳಿ ಆಮದು ಮಾಡಿಕೊಂಡು ಸಂಗ್ರಹಿಸಿಕೊಳ್ಳುತ್ತಿದೆ. ಆಮದು ಮಾಡಿಕೊಳ್ಳುವ ಮುನ್ನ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೇಡಿಕೆ ಎಷ್ಟಿದೆ ಎಂಬ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಎಲ್ಲ ರಾಜ್ಯಗಳಿಂದ ಒಟ್ಟು 33 ಸಾವಿರ ಕೋಟಿ ಟನ್ ಗಳಷ್ಟು ಈರುಳ್ಳಿಗೆ ಬೇಡಿಕೆ ಬಂದಿತ್ತು. ನಂತರ ವಿವಿಧ ಕಾರಣಗಳಿಂದ 14 ಸಾವಿರ ಕೋಟಿ ಟನ್ ಗೆ ಇಳಿಕೆಯಾಗಿದೆ. ಪ್ರಾರಂಭದಲ್ಲಿ 10 ಸಾವಿರ ಕೋಟಿ ಟನ್ ಈರುಳ್ಳಿ ಆಮದಿಗೆ ಯೋಚಿಸಲಾಗಿದೆ.
ವಿವಿಧ ದೇಶಗಳಲ್ಲಿ ಈರುಳ್ಳಿ ಬೆಳೆ ಅಂತಿಮ ಹಂತಕ್ಕೆ ಬಂದಿರುವುದರಿಂದ ಒಮ್ಮೆಲೇ ಈ ಪ್ರಮಾಣದ ಈರುಳ್ಳಿ ಖರೀದಿಗೆ ಮುಂದಾದರೆ ದುಬಾರಿಯಾಗಲಿದೆ. ಹೀಗಾಗಿ ಹಂತ ಹಂತವಾಗಿ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಈಗಾಗಲೇ 12 ಸಾವಿರ ಮಿಲಿಯನ್ ಟನ್ ಗಳಷ್ಟು ಈರುಳ್ಳಿ ದಾಸ್ತಾನು ಮಾಡಲಾಗಿದೆ. ಇನ್ನೂ 40 ಸಾವಿರ ಮಿಲಿಯನ್ ಟನ್ ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳುವುದಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.