Thursday, July 7, 2022

Latest Posts

ಈರುಳ್ಳಿ ರಫ್ತು ನಿಷೇಧದ ಬಳಿಕ, ಅವುಗಳ ಬೀಜಗಳ ಮೇಲೂ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಹೊಸದಿಲ್ಲಿ: ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಮೊದಲು ಈರುಳ್ಳಿ ಬೀಜಗಳ ​ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು. ರಫ್ತುದಾರರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿತ್ತು. ಇದೀಗ ದೇಶೀಯ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯಾಗಿರುವ ನಡುವೆ ತಕ್ಷಣ ಜಾರಿಗೆ ಬರುವಂತೆ ಈರುಳ್ಳಿ ಬಿತ್ತನೆ ಬೀಜಗಳ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್​​ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ ಇದಾಗಲೇ ರಫ್ತಿಗೆ ಸಿದ್ದವಾಗಿರುವ ಸರಕುಗಳಿಗೆ ಇದು ಅನ್ವಯಿಸುವುದಿಲ್ಲ.
ಈ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಈರುಳ್ಳಿ ಸೀಡ್ಸ್​ ರಫ್ತು 0.57 ಮಿಲಿಯನ್ ಡಾಲರ್ ಆಗಿದ್ದು, 2019-20ರ ಆರ್ಥಿಕ ವರ್ಷದಲ್ಲಿ 3.5 ಮಿಲಿಯನ್ ಡಾಲರ್​ಗಳಷ್ಟಿತ್ತು.ಈರುಳ್ಳಿ ಬೆಲೆಯನ್ನು ಒಳಗೊಂಡಿರುವಂತೆ ಈರುಳ್ಳಿ ರಫ್ತು ಮಾಡುವುದನ್ನು ಡಿಜಿಎಫ್‌ಟಿ ಈಗಾಗಲೇ ನಿಷೇಧಿಸಿದೆ.
ದೇಶದ ವಿವಿಧ ಮಾರುಕಟ್ಟೆಗಳಲ್ಲಿಈರುಳ್ಳಿ ರೀಟೇಲ್ ದರ ಕೆಜಿಗೆ 75ರಿಂದ 120 ರೂ. ದಾಟಿದೆ. ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿ, ಆಮದು ಹೆಚ್ಚಿದ್ದರಿಂದ ಚಿಲ್ಲರೆ ಹಾಗೂ ಹೋಲ್‌ಸೇಲ್ ಮಾರಾಟಗಾರರು ಈರುಳ್ಳಿ ಸಂಗ್ರಹ ಮಾಡುವುದರ ಮೇಲೆ ಮಿತಿ ಹೇರಿದೆ. ಆದರೆ ಈಗ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ದಾಸ್ತಾನು ಮೇಲೆ ಸರ್ಕಾರ ಮಿತಿ ವಿಧಿಸಿದೆ.
ಸರಕುಗಳ ದೇಶೀಯ ಲಭ್ಯತೆ ಸುಧಾರಿಸಲು ಮತ್ತು ಗ್ರಾಹಕರಿಗೆ ಪರಿಹಾರ ನೀಡಲು ಕೇಂದ್ರವು ಡಿಸೆಂಬರ್ 31ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಸ್ಟಾಕ್ ಹೋಲ್ಡಿಂಗ್ ಮಿತಿ ವಿಧಿಸಿತ್ತು.ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಯನ್ನು ಕೇವಲ 2 ಟನ್​​ವರೆಗೆ ಸಂಗ್ರಹಿಸಬಹುದು. ಆದರೆ, ಸಗಟು ವ್ಯಾಪಾರಿಗಳು 25 ಟನ್ ವರೆಗೆ ದಾಸ್ತಾನು ಮಾಡಿಕೊಳ್ಳುವ ಅವಕಾಶವಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss