ಹೊಸದಿಲ್ಲಿ: ಚೀನಾದಿಂದ ಹರಡಿ ಇಡಿ ಜಗತ್ತನ್ನೇ ತಲ್ಲಣಿಸುವಂತೆ ಮಾಡಿರುವ ಕೊರೋನಾ ಸೋಂಕು ದೇಶದ ವಿವಿಧೆಡೆಗಳಲ್ಲಿ ವ್ಯಾಪಿಸುತ್ತಿರುವ ನಡುವೆಯೂ ಈಶಾನ್ಯದ ಎಂಟು ರಾಜ್ಯಗಳ ಪೈಕಿ ಪಂಚ ರಾಜ್ಯಗಳು ಈಗ ಕೊರೋನಾಮುಕ್ತವಾಗಿವೆ. ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಹಾಗೂ ತ್ರಿಪುರಗಳು ಕೋವಿಡ್-19ರಿಂದ ಮುಕ್ತವಾಗಿವೆ ಎಂಬುದಾಗಿ ಈಶಾನ್ಯ ಪ್ರದೇಶಾಭಿವೃದ್ಧಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಘೋಷಿಸಿದ್ದಾರೆ.
ಉಳಿದ ಮೂರು ರಾಜ್ಯಗಳಾದ ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂ ಕೊರೋನಾ ಮುಕ್ತವಾಗಿಲ್ಲವಾದರೂ, ಕಳೆದ ಕೆಲ ದಿನಗಳಿಂದ ಅಲ್ಲಿ ಯಾವುದೇ ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂಬುದಾಗಿ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಕೇಸ್ಗಳು ಕಡಿಮೆಯಾಗಿರುವುದಕ್ಕೆ ಭಾರತ ಸರಕಾರದ ಸಮಯೋಚಿತ ನಿರ್ಧಾರಗಳು ನೆರವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ 6 ವರ್ಷಗಳಿಂದ ಈ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿ ಸಂದರ್ಭದಲ್ಲೂ ಈ ಪ್ರದೇಶಕ್ಕೆ ಸರಕುಸಾಗಣೆ ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.ಈ ಕಾರಣದಿಂದ ಇಲ್ಲಿ ಅಗತ್ಯ ವಸ್ತುಗಳ ಯಾವುದೇ ಅಭಾವ ಸೃಷ್ಟಿಯಾಗಿಲ್ಲ. ಮಾ. ೩೦ರಿಂದ ಇಲ್ಲಿಯವರೆಗೂ ಏರ್ ಇಂಡಿಯಾ ಹಾಗೂ ಭಾರತೀಯ ವಾಯು ಪಡೆಯ ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಈಗ ಈ ಎಲ್ಲ 8 ಈಶಾನ್ಯ ರಾಜ್ಯಸರಕಾರಗಳು ಪರಸ್ಪರ ಸಹಕಾರ -ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಶಿಲ್ಲಾಂಗ್ನಲ್ಲಿರುವ ಈಶಾನ್ಯ ಪ್ರದೇಶ ಅಭಿವೃದ್ಧಿ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಈಶಾನ್ಯ ಭಾರತ, ಜಮ್ಮು -ಕಾಶ್ಮೀರ, ಲಡಾಖ್ಮತ್ತು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶಗಳಿಗೆ ಪ್ರಧಾನಿ ಮೋದಿ ನೀಡಿರುವ ಆದ್ಯತೆಯನ್ನು ತಿಳಿಸುತ್ತದೆ ಎಂದೂ ಅವರು ನುಡಿದರು.