ಕಲಬುರಗಿ: ಇದೇ ಅಕ್ಟೋಬರ್ 28 ರಂದು ಜರುಗಲಿರುವ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್)ವನ್ನು ಹೊಂದಿಲ್ಲದಿದ್ದರೂ ಮತದಾರರು ಚುನಾವಣಾ ಆಯೋಗ ತಿಳಿಸಿದ ಕೆಳಕಂಡ 9 ಪರ್ಯಾಯ ದಾಖಲಾತಿಗಳಲ್ಲಿ ಒಂದು ದಾಖಲಾತಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಡಾ. ಎನ್.ವಿ. ಪ್ರಸಾದ್ ಅವರು ತಿಳಿಸಿದ್ದಾರೆ.
ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 28 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಧಿಯನ್ನು ನಿಗದಿಪಡಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು (ಎಪಿಕ್) ಮತದಾರರ ಗುರುತಿನ ಚೀಟಿ ಹೊಂದಿಲ್ಲದವರು ತಮ್ಮ ಭಾವಚಿತ್ರವಿರುವ ಕೆಳಕಂಡ 9 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಲಿಸಿದೆ.
ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ಕಾರ್ಡ್, ಪಾಸ್ಪೋರ್ಟ್, ರಾಜ್ಯ/ ಕೇಂದ್ರ ಸರ್ಕಾರ/ಸಾರ್ವಜನಿಕ ಉದ್ಯಮಗಳು, ಸ್ಥಳೀಯ ಸಂಸ್ಥೆ ಅಥವಾ ಇತರೆ ಖಾಸಗಿ ಕೈಗಾರಿಕಾ ಸಂಸ್ಥೆಗಳು ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರ ನೀಡುವ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡುವ ಉದ್ಯೋಗ ಗುರುತಿನ ಚೀಟಿ, ವಿಶ್ವವಿದ್ಯಾಲಯಗಳು ನೀಡುವ ಮೂಲ ಪದವಿ ಹಾಗೂ ಡಿಪ್ಲೋಮಾ ಪ್ರಮಾಣಪತ್ರ ಹಾಗೂ ಸಕ್ಷಮ ಪ್ರಾಧಿಕಾರದಿಂದ ನೀಡಿದ ಮೂಲ ದೈಹಿಕ ಅಂಗವಿಕಲತೆಯ ಪ್ರಮಾಣಪತ್ರ.