-ರಕ್ಷಿತ್ ಬೆಳಪು
ಕುಂದಾಪುರ: ನಗರ ಭಾಗದ ಜನತೆಯ ದಶಕದ ಕನಸಿಗೆ ಕೊನೆಗೂ ಮುಕ್ತಿ ಸಿಗಲಿಲ್ಲ. ಡಿಸೆಂಬರ್ನಲ್ಲಿ ಕಾಮಗಾರಿ ಫಿನಿಶ್ ಮಾಡಿ ಕುಂದಾಪುರ ಮೇಲ್ಸೆತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ ಎಂದು ನವಯುಗ ಕಂಪೆನಿ ಹೇಳಿತ್ತು. ಆದರೆ ಈಗ ಕೇವಲ ಟೋಲ್ ವಸೂಲಾತಿ ನಡೆಸುತ್ತಿದೆ ಬಿಟ್ಟರೇ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ.
ನೆಪಗಳಲ್ಲೇ ಕಾಲ ಕಳೆದ ನವಯುಗ: 2010ರಲ್ಲಿ ಕುಂದಾಪುರದಲ್ಲಿ ಎಮ್ಬ್ಯಾಕ್ಮೆಂಟ್ ಮಾಡುವುದು ಎಂದು ನಿರ್ಧರಿಸಲಾಗಿತ್ತು. 2014ರಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ನಂತರ ಮೇಲ್ಸೆತುವೆ ಯೋಜನೆ ಹಾಕಿಕೊಳ್ಳಲಾಯಿತು. 2014ರಲ್ಲಿ ನವಯುಗ ಕಂಪೆನಿ ಸೀಝ್ ಆದ ನಂತರ ದುಡ್ಡಿಲ್ಲ, ಫಂಡ್ ಬರಲಿಲ್ಲ ಎಂದು ನಾನಾ ಕಾರಣ ನೀಡುತ್ತಿದೆ. ಆದರೆ ಇದರಲ್ಲಿ ಸತ್ಯ ಎಷ್ಟು ಎಂದು ಯಾರು ತಿಳಿಯುವ ಕೆಲಸ ಮಾಡಿಲ್ಲ.
ಮತ್ತೆ ಮಾರ್ಚ್ಗೆ ಅವಧಿ ವಿಸ್ತರಣೆ: ಡಿಸೆಂಬರ್ ಆಯ್ತು. ಈಗ ಮಾರ್ಚ್ನಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದು ನವ ಯುಗದವರು ಹೇಳಿದ್ದಾರಂತೆ. ಹೀಗಂತ ಸಮಯ ವಿಸ್ತರಣೆ ನೀಡಿದವರು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ. ಸಾರ್ವಜನಿಕರ ಕೂಗು ಕೇಳುವವರು ಯಾರು ಇಲ್ಲದಂತಾಗಿದೆ. ಡಿಸೆಂಬರ್, ಮಾರ್ಚ್ ಎಂದು ಹೇಳುತ್ತಾ ತಿಂಗಳು ದೂಡುತ್ತಿದ್ದಾರೆ ವಿನಃ ಕಾಮಗಾರಿ ತ್ವರಿತವಾಗಿ ಸಾಗುತ್ತಿಲ್ಲ.
ಯಾವಾಗ ನೋಡಿದ್ರೂ ಟ್ರಾಫಿಕ್ ಜಾಮ್: ಮೇಲ್ಸೆತುವೆ ಕಾಮಗಾರಿ ವಿಳಂಬದಿಂದಾಗಿ ವಿನಾಯಕ ಥೀಯೆಟರ್ನ ಸರ್ವೀಸ್ ರಸ್ತೆಯಿಂದ ಶಾಸ್ತ್ರಿ ಸರ್ಕಲ್ ವರೆಗೆ ವಾಹನಗಳು ಸಾಲು ಸಾಲಾಗಿ ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸರ್ವಿಸ್ ರಸ್ತೆಯಲ್ಲಿ ಅಪಘಾತ ಸಂಖ್ಯೆಯೂ ಹೆಚ್ಚಾಗಿದ್ದು, ಇವೆಲ್ಲಕ್ಕೂ ಕಾರಣ ಮೇಲ್ಸೆತುವೆ ಪೂರ್ಣಗೊಳ್ಳದಿರುವುದು.
ಟೋಲ್ ಸಿಬ್ಬಂದಿಯೋ ಗೂಂಡಾಗಳೋ…?
ಸಾಸ್ತಾನ ಹಾಗೂ ಹೆಜಮಾಡಿ ಟೋಲ್ ನಲ್ಲಿರುವ ಸಿಬ್ಬಂದಿಗಳು ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ ಟ್ಯಾಗ್ ಲೇನ್ನಲ್ಲಿ ಬಂದರೇ ಗೂಂಡಾಗಳಂತೆ ವರ್ತಿಸುತ್ತಾರೆ. ಅಲ್ಲದೇ ಯಾವುದೇ ವಾಹನ ಸವಾರರಿಗೆ ಗೌರವ ಕೊಡದೇ ದಡೂತಿ ದೇಹದ ವ್ಯಕ್ತಿಗಳು ಕಾಡು ಪ್ರಾಣಿಗಳಂತೆ ವರ್ತಿಸುತ್ತಾರೆ ಎಂಬ ಆರೋಪವಿದೆ.
ಸ್ಥಳೀಯರಿಗೆ ಅವಕಾಶ ನೀಡಿದರೆ ತಪ್ಪುತ್ತದೆ ಸಮಸ್ಯೆ
ಟೋಲ್ನಲ್ಲಿ ಬಾಡಿಗೆ ಗೂಂಡಾಗಳ ರೀತಿ ವರ್ತಿಸುವವರನ್ನು ಬಿಟ್ಟು ಸ್ಥಳೀಯ ಯುವಕ ಯುವತಿಯರಿಗೆ ಕೆಲಸ ನೀಡಬೇಕು. ಕಡಿಮೆ ಸಂಬಳ ಕೊಡಬಹುದು ಎಂಬ ಕಾರಣಕ್ಕೆ ಉತ್ತರ ಭಾರತೀಯರನ್ನೇ ಹೆಚ್ಚಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಇಲ್ಲಿನ ಯುವಕ ಯುವತಿಯರಿಗೆ ಕೆಲಸ ನೀಡಿದರೇ ಸ್ಥಳೀಯರು ಯಾರು ಎಂಬುದು ಅವರಿಗೂ ಗೊತ್ತಿರುತ್ತದೆ. ಟೋಲ್ನಲ್ಲಿ ಗಲಾಟೆಗಳಾಗುವುದು ತಪ್ಪುತ್ತದೆ.
ಇಲ್ಲಿ ಬಾಯಿ ಮಾತಿಗೆ ಸೀಮಿತವಾಯಿತೇ ಎಚ್ಚರಿಕೆ?
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಕೆಲ ದಿನಗಳ ಹಿಂದೆ ಕುಂದಾಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನವಯುಗ ಕಂಪೆನಿಯವರು ಡಿಸೆಂಬರ್ನಲ್ಲಿ ಕಾಮಗಾರಿ ಮುಕ್ತಾಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಮಾರ್ಚ್ ನಲ್ಲಿ ಮುಕ್ತಾಯ ಮಾಡುತ್ತೇವೆ ಎಂದು ಕಾಲಾವಕಾಶ ಕೇಳಿದ್ದಾರೆ. ಆದರೆ ನನಗೆ ನಂಬಿಕೆ ಇಲ್ಲ. ಮಾರ್ಚ್ನಲ್ಲಿ ಮುಕ್ತಾಯ ಮಾಡದಿದ್ದರೇ ಕಠಿಣ ಕಾನೂನು ಕ್ರಮ ಜರಗಿಸುತ್ತೇವೆ ಖಂಡಿತಾ ಎಂದು ಹೇಳಿದ್ದರು. ಆದರೆ ಕೇವಲ ಬಾಯಿ ಮಾತಿನಲ್ಲಿ ಮಾತ್ರ ನವಯುಗದವರಿಗೆ ವಾರ್ನಿಂಗ್ ಕೊಟ್ಟರೇ ಪ್ರಯೋಜನವಿಲ್ಲ.
ಬೇಗ ಪೂರ್ಣಗೊಳಿಸಿ ದೊಡ್ಡ ದೊಡ್ಡ ನದಿಗಳಿಗೆ ಹೊಸ ಬ್ರಿಡ್ಜ್ ಕಾಮಗಾರಿ ಪೂರ್ಣವಾಗಿರುವಾಗ ಈ ಫ್ಲೈಓವರ್ ಇಷ್ಟು ವಿಳಂಬ ಆಗಲು ಕಾರಣವೇನು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಲಿ.
ಕಿಶೋರ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ.
ಮಾರ್ಚ್ ಅಂತ್ಯದೊಳಗೆ…
ನವಯುಗ ಕಂಪೆನಿಯವರೊಂದಿಗೆ ಸಭೆ ನಡೆಸಿದ್ದು, ಕೊರೋನಾ ಕಾರಣ ನೀಡಿದೆ. ಈ ವರ್ಷದ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕೆ. ರಾಜು, ಸ.ಕಮೀಷನರ್, ಕುಂದಾಪುರ