Friday, July 1, 2022

Latest Posts

ಈ ವಾರ ಸಂಜೆ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣುತ್ತದೆ ನಿಯೋವೈಸ್ ಎಂಬ ಅಪೂರ್ವ ಧೂಮಕೇತು!

ಉಡುಪಿ: ಈ ವಾರ ಸಂಜೆ ಪಶ್ಚಿಮ ಆಕಾಶದಲ್ಲಿ ಅಪೂರ್ವ ಧೂಮಕೇತು ನಿಯೋವೈಸ್ ಬರಿಗಣ್ಣಿಗೆ ಕಾಣುತ್ತದೆ. ಅದೇ ಸಮಯಕ್ಕೆ ಪೂರ್ವ ಆಕಾಶದಲ್ಲಿ ವರ್ಷಕ್ಕೊಮ್ಮೆ ಭೂಮಿಗೆ ಸುಮಾರು 30 ಕೋಟಿ ಕಿ.ಮೀ. ಹತ್ತಿರ ಬರುವ ಗುರುಗ್ರಹ ಹಾಗೂ ಶನಿಗ್ರಹಗಳು ಹೊಳೆಯುತ್ತಾ ಕಾಣಿಸಲಿವೆ.
ಇತ್ತೀಚಿಗೆ ಗುರುತಿಸಿದ ನಿಯೋವೈಸ್ ಧೂಮಕೇತು ಸೂರ್ಯನ ಸುತ್ತು ಮುಗಿಸಿ ಜು. 22ರಂದು ಭೂಮಿಗೆ ಸಮೀಪದಲ್ಲಿ (ಸುಮಾರು 10.30 ಕೋಟಿ ಕಿ.ಮೀ.) ಹಾದು ಹೋಗಲಿದೆ. ಈ ಧೂಮಕೇತು ಸುಮಾರು ಜು. 25ರ ವರೆಗೆ ಪಶ್ಚಿಮ ಆಕಾಶದಲ್ಲಿ ಸಂಜೆಯಾದೊಡನೆ ಬರೀ ಕಣ್ಣಿಗೆ ಕಾಣುತ್ತದೆ.
ಸೂರ್ಯನಿಂದ ಅತೀ ಹೊರವಲಯದಲ್ಲಿ ಅನಂತ ಆಕಾಶದಲ್ಲಿ, ಸೂರ್ಯನ ಸುತ್ತ ಅಲೆಯುವ (ಸುಮಾರು 15,000 ಕೋಟಿ ಕಿ.ಮೀ. ಊರ್ಸ್ ಕ್ಲೌಡ್) ಇದು ಅತಿ ಶೀತಲದ ಕಲ್ಲುಂಡೆ. ಇದು ಈಗ ಸೂರ್ಯನನ್ನು ಸಮೀಪಿಸುತ್ತಿದೆ. ಸುಮಾರು 5 ಕಿ.ಮೀ. ವ್ಯಾಸದ ಈ ಧೂಮಕೇತುವಿಗೆ, ಸೂರ್ಯನನ್ನು ಸಮೀಪಿಸುತ್ತಿದ್ದಂತೆ ಲಕ್ಷ ಕಿ.ಮೀ. ಉದ್ದದ ಬಾಲ ಬೆಳೆಯುತ್ತದೆ. ಅದೇ ಧೂಮಕೇತುಗಳ ವಿಶೇಷ. ಸೂರ್ಯನ ಬಿಸಿ ಕಿರಣಗಳಿಂದ ಧೂಮಕೇತು ಕೇತುವಿನ ಮೇಲಿನ ಕರಗಿದ ತೇವಾಂಶ ಹಾಗೂ ಅನಿಲದಿಂದ ಈ ಬಾಲ ಸೃಷ್ಟಿಯಾಗುತ್ತದೆ.
ಪ್ರಕಾಶಮಾನ ಪ್ರಜ್ವಲಿಸುವ ಗ್ರಹಗಳು
ಸೂರ್ಯನಿಂದ ಸರಾಸರಿ 74 ಕೋಟಿ ಕಿ.ಮೀ. ದೂರದಲ್ಲಿರುವ ಗುರುಗ್ರಹ ಯಾವಾಗಲೂ ಭೂಮಿಗೆ ಒಂದೇ ದೂರದಲ್ಲಿರುವುದಿಲ್ಲ. ವರ್ಷಕ್ಕೊಮ್ಮೆ ಸುಮಾರು 59 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಮತ್ತೆ ಆರು ತಿಂಗಳ ನಂತರ ಸುಮಾರು 89 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಹತ್ತಿರ ಬಂದಾಗ ದೊಡ್ಡದಾಗಿ ಕಂಡುಬರುತ್ತದೆ. ಶನಿಗ್ರಹ ಸೂರ್ಯನ ಸುತ್ತು ಸುಮಾರು 140 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದ್ದರೂ ಭೂಮಿಗೆ ಸಮೀಪ ಬಂದಾಗ ವರ್ಷಕ್ಕೊಮ್ಮೆ 125 ಕೋಟಿ ಕಿ.ಮೀ. ಇದ್ದು, ಆರು ತಿಂಗಳ ನಂತರ ಸುಮಾರು 165 ಕೋಟಿ ಕಿ.ಮೀ. ದೂರದಲ್ಲಿ ಇರುತ್ತದೆ. ಈ ವಾರ ಈ ಎರಡೂ ಗ್ರಹಗಳು ಭೂಮಿಗೆ ಹತ್ತಿರ ಬರುವುದರಿಂದ ಪೂರ್ವ ಆಕಾಶದಲ್ಲಿ ಸಂಜೆ ವೃಶ್ಚಿಕ ರಾಶಿಯ ಬುಡದಲ್ಲಿ ಹೊಳೆಯುತ್ತವೆ.
ಅಪರೂಪದ ಧೂಮಕೇತು ನಿಯೋವೈಸ್, ಜು. 22ರ ಹೊತ್ತಿಗೆ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತ ಋಷಿಮಂಡಲದ ಕ್ರತು ಫುಲಹ ನಕ್ಷತ್ರಗಳ ಸಮೀಪ ಗೋಚರಿಸುತ್ತದೆ ಎಂದು ಉಡುಪಿಯ ಭೌತ ವಿಜ್ಞಾನಿ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss