ಹೊಸ ದಿಗಂತ ವರದಿ, ಮಂಗಳೂರು:
ನಗರದಲ್ಲಿ ಉಗ್ರಗಾಮಿಗಳ ಪರ ಗೋಡೆ ಬರಹ ಬರೆದಿರುವ ಕೃತ್ಯವನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಖಂಡಿಸಿದ್ದಾರೆ.
ಮಂಗಳೂರಿನಂತಹ ನಗರದ ಹೃದಯ ಭಾಗದಲ್ಲಿ ಲಷ್ಕರ್ ಇ ತೋಯ್ಬಾ, ತಾಲಿಬಾನ್ ಮುಂತಾದ ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದಿರುವುದು ಅಕ್ಷಮ್ಯ. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಜತೆಗೆ ಆತಂಕ ಉಂಟುಮಾಡುವ ಪ್ರಯತ್ನ ನಡೆದಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕಿದೆ ಎಂದು ಅವರು ಹೇಳಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರ ಪತ್ತೆಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಮಾನಾಥ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.