Sunday, July 3, 2022

Latest Posts

ಉಗ್ರರ ಗೋಡೆ ಬರಹ| ಆರೋಪಿಗಳ ಪರ ವಕಾಲತ್ತು ವಹಿಸಬಾರದು ಎಂದು ಮಂಗಳೂರು ವಕೀಲರ ಸಂಘಕ್ಕೆ ಮನವಿ ಮಾಡಿದ ಬಿಜೆಪಿ ಯುವಾ ಮೋರ್ಚಾ

ಹೊಸದಿಗಂತ ವರದಿ, ಮಂಗಳೂರು:

ನಗರದಲ್ಲಿ ಎರಡು ಕಡೆ ಉಗ್ರಗಾಮಿಗಳ ಪರ ಗೋಡೆ ಬರಹ ಬರೆದಿರುವ ಆರೋಪಿಗಳ ಪರ ವಕಾಲತ್ತು ವಹಿಸಬಾರದು ಎಂದು ಬಿಜೆಪಿ ಯುವ ಮೋರ್ಚಾ ಮಂಗಳೂರು ದಕ್ಷಿಣ ವತಿಯಿಂದ ಮಂಗಳೂರು ವಕೀಲರ ಸಂಘಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.

ಉಗ್ರರ ಪರ ಗೋಡೆ ಬರಹದ ಮೂಲಕ ಸಾಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಿಸಲು ದೇಶದ್ರೋಹಿಗಳು ಹುನ್ನಾರ ನಡೆಸಿದ್ದಾರೆ. ಸಮಾಜದಲ್ಲಿ ದೊಂಬಿ, ಗಲಭೆ, ಅಶಾಂತಿ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶದ್ರೋಹಿಗಳು ಹಾತೊರೆಯುತ್ತಿದ್ದಾರೆ. ಈ ಕೃತ್ಯ ದೇಶದ ಪ್ರಜೆಗಳಿಗೆ ಆತಂಕ ಉಂಟುಮಾಡಿದೆ.

ಗೋಡೆ ಬರಹ ಬರೆದ ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಮುಂದಕ್ಕೆ ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಈ ಸಂದರ್ಭ ದೇಶದ್ರೋಹಿಗಳಾದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ನಡೆಸದೇ, ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ವಕೀಲ ರಾಘವೇಂದ್ರ ರಾವ್ ಮನವಿ ಸ್ವೀಕರಿಸಿದರು. ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ಸಚಿನ್‌ರಾಜ್ ರೈ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕೋಟಿಮುರ, ಉಪಾಧ್ಯಕ್ಷರಾದ ಪ್ರಕಾಶ್ ಗರೋಡಿ, ಮೌನೀಶ್ ಚೌಟ, ನಿಕೀತ್ ಕೊಠಾರಿ, ಜಯರಾಜ್ ಶೆಟ್ಟಿ, ಕಾರ್ಯದರ್ಶಿ ದೀಕ್ಷಿತ್ ಅಳಪೆ, ಮೋಹಿತ್ ನಿಯೋಗದಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss