ಹೊಸದಿಗಂತ ಆನ್ಲೈನ್ ಡೆಸ್ಕ್:
ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆ ವರದಿಯ ಹಿನ್ನೆಲೆಯಲ್ಲಿ ಕಾಸರಗೋಡು ಕರಾವಳಿಯುದ್ದಕ್ಕೂ ಕಟ್ಟೆಚ್ಚರ ಇನ್ನಷ್ಟು ತೀವ್ರಗೊಳಿಸಲಾಗಿದೆ.
ಗುಪ್ತಚರ ಇಲಾಖೆ ವರದಿಯಲ್ಲಿ ಈ ಬಾರಿ ಸಮುದ್ರ ಮಾರ್ಗದ ಮೂಲಕ ಉಗ್ರರು ನುಸುಳುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಕಡಲ ತೀರಗಳಲ್ಲಿಯೂ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.
ಇದಲ್ಲದೆ ಜಿಲ್ಲೆಯ ಎಲ್ಲಾ ಕೇಂದ್ರ, ರಾಜ್ಯ ಸರಕಾರಿ ಸಂಸ್ಥೆಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿಯೂ ವ್ಯಾಪಕ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಪ್ರಮುಖ ಸಂಸ್ಥೆಗಳಿಗೂ ಇದೀಗ ಪೊಲೀಸ್ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ.
ಉಗ್ರರ ದಾಳಿ ಸಾಧ್ಯತೆಯ ಹಿನ್ನೆಲೆಯಲ್ಲಿ ‘ಕರಾವಳಿ ಬೇಟೆ’ ಹೆಸರಿನಲ್ಲಿ ಪೊಲೀಸರು ಈಗಾಗಲೇ ಅಲರ್ಟ್ ಆಗಿದ್ದು, ಭದ್ರತಾ ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳ ಮೇಲೆ ನಿಗಾ ಹೆಚ್ಚಿಸಲಾಗಿದೆ.
ಕಾಸರಗೋಡು ಜಿಲ್ಲೆ ಮಾತ್ರವಲ್ಲದೆ ಕೇರಳದ ಎಲ್ಲಾ ಜಿಲ್ಲೆಗಳಲ್ಲಿಯೂ ಆಂತರಿಕ ಭದ್ರತೆ ಹೆಚ್ಚಿಸಲಾಗಿದೆ. ಮಾವೋವಾದಿಗಳ ಬೆದರಿಕೆಯುಳ್ಳ ಜಿಲ್ಲೆಗಳಲ್ಲೂ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.