ಹೊಸದಿಗಂತ ವರದಿ, ಮಂಗಳೂರು:
ನಗರದಲ್ಲಿ ಉಗ್ರಗಾಮಿಗಳ ಪರ ಗೋಡೆ ಬರಹ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ (ಎನ್ಐಎ) ವಹಿಸಬೇಕು ಎಂದು ಆಗ್ರಹಿಸಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊಲೆ ಯತ್ನ ಖಂಡಿಸಿ ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ವತಿಯಿಂದ ಡಿ.23ರಂದು ಮಂಗಳೂರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದರು.
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಮೂಲಕ ಲಷ್ಕರ್ ಇ ತೋಬ್ಬಾ ಉಗ್ರ ಸಂಘಟನೆಯನ್ನು ಬೆಂಬಲಿಸಿ, ಮುಸ್ಲಿಂ ವಿರೋಧಿಗಳನ್ನು ಹತ್ಯೆ ಮಾಡುವುದಾಗಿ ಭಯೋತ್ಪಾದನೆ ಚಟುವಟಿಕೆ ಪ್ರಾರಂಭಿಸಲು ಯತ್ನಿಸಿರುವುದು ಆತಂಕಕಾರಿ ವಿಷಯ. ಇದರ ಹಿಂದೆ ಭಯೋತ್ಪಾದಕರ ನಂಟು ಇರುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಮೂವರ ಬಳಿ ಜಮೈಕಾ ಮೂಲದ ಶೇಖ್ ಅಬ್ದುಲ್ಲಾ ಫೈಝಲ್ ಪ್ರಚೋದನಾಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ಸಿಕ್ಕಿರುವುದು ಆಘಾತಕಾರಿ. ಈ ಪ್ರಕರಣ ಗಮನಿಸಿದಾಗ ದ.ಕ. ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಬೇರೂರಿರುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಎನ್ಐಎ ತನಿಖೆ ಮಾಡಬೇಕು ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಗಣೇಶ್ ಕಾಮತ್ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಖಂಡನೀಯ. ಕಳೆದ ವರ್ಷವೂ ಇದೇ ಸಮಯದಲ್ಲಿ ಎನ್ಆರ್ಸಿ ವಿರೋಧಿ ಪ್ರತಿಭಟನೆ ನೆಪದಲ್ಲಿ ಪೊಲೀಸರ ಮೇಲೆ ಕಲ್ಲು ಎಸೆತ, ಹಲ್ಲೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನ ಮಾಡಲಾಗಿತ್ತು. ಅದೇ ಕಾರ್ಯವನ್ನು ಪುರಾವರ್ತಿಸಲು ಗಲಭೆ ಸಂಚು ರೂಪಿಸಲು ಪ್ರಯತ್ನಿಸಲಾಗಿದೆ. ಈ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗೋಡೆ ಬರಹ ಪ್ರಕರಣದ ಆರೋಪಿಗಳ ಪರ ವಕಾಲತ್ತು ಮಾಡಬಾರದು ಎಂದು ಮಂಗಳೂರು ವಕೀಲರ ಸಂಘಕ್ಕೆ ಅವರು ಈ ಸಂದರ್ಭ ಮನವಿ ಮಾಡಿದರು.