Friday, July 1, 2022

Latest Posts

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ ಜಿಲ್ಲೆಯಲ್ಲಿದ್ದ ಖಚಿತ ಪ್ರಕರಣಗಳ ಸಂಖ್ಯೆ ಕೇವಲ 3. ಒಟ್ಟು 46 ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳಿರಲಿಲ್ಲ. ಮೇ 15ರಿಂದ 26ರವರೆಗೆ 12 ದಿನಗಳಲ್ಲಿ ಬರೋಬ್ಬರಿ 108 ಪ್ರಕರಣಗಳು ಕಂಡುಬಂದಿವೆ. ಪರಿಣಾಮ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳ ದರವೂ ಏರಿಕೆಯಾಗುತ್ತಿದೆ.
ಪ್ರಕರಣ ಹೆಚ್ಚಳ ದರ ಶೇ. 38.8ಕ್ಕೆ ಏರಿಕೆ
ರಾಜ್ಯ ಕೋವಿಡ್-19 ವಾರ್ ರೂಂ ಮಾಹಿತಿ ಪ್ರಕಾರ 10 ದಿನಗಳ ಹಿಂದೆ ಜಿಲ್ಲೆಯಲ್ಲಿ ಪ್ರಕರಣಗಳ ಸರಾಸರಿ ಹೆಚ್ಚಳ ದರ ಶೇ. 24.6ರಷ್ಟು ಇತ್ತು. ಅದು ಸೋಮವಾರ ಶೇ. 38.8ಕ್ಕೆ ಏರಿದೆ. ಇದನ್ನು ಹಿಂದಿನ ಐದು ದಿನಗಳಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ಅದರಂತೆ ರಾಜ್ಯದ ಕೋವಿಡ್ ಪ್ರಕರಣಗಳ ಸರಾಸರಿ ಹೆಚ್ಚಳ ದರ ಶೇ. 8.3 ಇದೆ. ಉಡುಪಿ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ.
ಪ್ರಕರಣ ದ್ವಿಗುಣವಾಗುವ ಅವಧಿ 5ದಿನ
ಒಂದೆಡೆ ಸೋಂಕಿತ ಪ್ರಕರಣಗಳ ಹೆಚ್ಚಳ ದರ ಏರಿಕೆಯಾಗುತ್ತಿದ್ದರೆ, ಇನ್ನೊಂದರೆ ಆತಂಕವನ್ನು ಹೆಚ್ಚಿಸಿರುವುದು ಪ್ರಕರಣಗಳು ದ್ವಿಗುಣಗೊಳ್ಳಲು ತೆಗೆದುಕೊಳ್ಳುವ ಅವಧಿ. ಕರ್ನಾಟಕ ರಾಜ್ಯದಲ್ಲಿ ಪ್ರಕರಣಗಳ ದ್ವಿಗುಣವಾಗಲು 10 ದಿನಗಳನ್ನು ತೆಗೆದುಕೊಳ್ಳುತ್ತಿದ್ದರೆ, ಉಡುಪಿ ಜಿಲ್ಲೆಯಲ್ಲಿ ಐದೇ ದಿನಗಳಲ್ಲಿ ಪ್ರಕರಣಗಳು ದ್ವಿಗುಣವಾಗುತ್ತಿವೆ ಎಂದು ರಾಜ್ಯ ಕೋವಿಡ್-19 ವಾರ್ ರೂಂ ಮಾಹಿತಿ ನೀಡಿದೆ.
ರೋಗ ಲಕ್ಷಣಗಳಿಲ್ಲದೇ ವೈರಸ್ ದಾಳಿ
ಇನ್ನೂ ಗಮನಾರ್ಹ ಸಂಗತಿಯೆಂದರೆ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಶೇ. 89 ರಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಸೋಂಕು ಅಂಟಿಕೊಂಡಿದೆ. ಒಟ್ಟು 111 ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸಿಕೊಳ್ಳದೇ 99 ಜನರ ಮೇಲೆ ನೋವೆಲ್ ಕೊರೋನಾ ವೈರಸ್ ದಾಳಿ ಮಾಡಿದೆ. ಕೇವಲ 12 ಜನರಲ್ಲಿ ಮಾತ್ರ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.
ಯಾವುದೇ ರೋಗ ಲಕ್ಷಣಗಳು ಇಲ್ಲದೇ ಸೋಂಕು ಕಾಣಿಸಿಕೊಳ್ಳುವುದು ಮತ್ತು ಸ್ಥಳೀಯರಲ್ಲಿ ಕೋವಿಡ್ ಪತ್ತೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಮೇ 23ರ ವರೆಗೆ ಜಿಲ್ಲೆಯಲ್ಲಿ ಸ್ಥಳೀಯರಲ್ಲಿ ಸೋಂಕು ಕಂಡುಬಂದಿರಲಿಲ್ಲ. ಆದರೆ ಇದೀಗ ಸ್ಥಳೀಯರಲ್ಲೂ ಯಾವುದೇ ಲಕ್ಷಣಗಳಿಲ್ಲದೇ ಕೊರೋನಾ ವೈರಸ್ ದಾಳಿ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss