Friday, July 1, 2022

Latest Posts

ಉಡುಪಿಯಲ್ಲಿ ಈ ಬಾರಿ ವಾಡಿಕೆಗಿಂತ ಶೇ. 36.47 ರಷ್ಟು ಮಳೆ ಕೊರತೆ: ಕೃಷಿಕರಲ್ಲಿ ಆತಂಕ

ಉಡುಪಿ: ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಪಡೆಯುವ ಜಿಲ್ಲೆ ಉಡುಪಿಯಲ್ಲಿ ಈ ಬಾರಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 36.47 ರಷ್ಟು ಮಳೆ ಕೊರತೆಯಾಗಿದೆ. ನದಿ-ಹೊಳೆಗಳು ಇನ್ನೂ ತುಂಬಿಲ್ಲ. ಇದು ಸಹಜವಾಗಿ ಭತ್ತದ ಬೆಳೆಗಾರರ ಸಹಿತ ಜನರನ್ನು ಆತಂಕಿತರನ್ನಾಗಿಸಿದೆ.
ಜೂನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 1055.3 ಮಿ.ಮೀ. ವಾಡಿಕೆ ಮಳೆ ಬೀಳಬೇಕಿದ್ದರೂ ವಾಸ್ತವದಲ್ಲಿ ಬಿದ್ದಿರುವುದು ಕೇವಲ 670.4 ಮಿ.ಮೀ. ಮಳೆ ಮಾತ್ರ. ವಾಡಿಕೆಗಿಂತ 384.9 ಮಿ.ಮೀ. ಮಳೆ ಕೊರತೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 45.3 ಮಿ.ಮೀ. ಮಳೆ ಹೆಚ್ಚು ಬಿದ್ದಿದೆ. ಕಳೆದ ಸಾಲಿನಲ್ಲಿ ಜೂನ್ ತಿಂಗಳಲ್ಲಿ 625.1 ಮಿ.ಮೀ. ಮಳೆ ದಾಖಲಾಗಿತ್ತು.
ಕುಂದಾಪುರದಲ್ಲಿ ಶೇ. 69.15ರಷ್ಟು ಮಳೆ
ಕಳೆದ ವರ್ಷ ಜೂನ್ ತಿಂಗಳಲ್ಲಿ ಕುಂದಾಪುರ ತಾಲೂಕಿನಲ್ಲಿ 640.5 ಮಿ.ಮೀ. ಮಳೆಯಾಗಿದ್ದು, ಈ ಬಾರಿ 719.9 ಮಿ.ಮೀ. ಮಳೆ ಸುರಿದಿದೆ. ಅಂದರೆ ಸರಾಸರಿ ಶೇ. 69.15ರಷ್ಟು ಮಳೆ ಬಿದ್ದಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 1041 ಮಿ.ಮೀ. ಮಳೆಯ ಸುರಿಯಬೇಕಿತ್ತು. ವಾಡಿಕೆಗಿಂತ 321.1 ಮಿ.ಮೀ. ಕಡಿಮೆ ಹಾಗೂ ಕಳೆದ ವರ್ಷಕ್ಕಿಂತ 79.4 ಮಿ.ಮೀ. ಮಳೆ ಅಧಿಕ ಸುರಿದಿದೆ.
ಉಡುಪಿಯಲ್ಲಿ ಶೇ. 65.9 ವರ್ಷಧಾರೆ
ಉಡುಪಿ ತಾಲೂಕಿನಲ್ಲಿ ಈ ಬಾರಿ ಜೂನ್ ತಿಂಗಳಲ್ಲಿ ಶೇ. 65.90ರಷ್ಟು ಅಂದರೆ 680.8 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 1033 ಮಿ.ಮೀ. ಮಳೆಯಾಗಬೇಕಿದ್ದು, 352.2 ಮಿ.ಮೀ. ಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 576.3 ಮಿ.ಮೀ. ಮಳೆ ಬಿದ್ದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 104.5 ಮಿ.ಮೀ. ಜಾಸ್ತಿ ಮಳೆಯಾಗಿದೆ.
ಕಾರ್ಕಳದಲ್ಲಿ ಶೇ. 46.73 ಮಳೆ ಕೊರತೆ
ಮಲೆನಾಡಿನ ತಪ್ಪಲಿನಲ್ಲಿರುವ ಹಾಗೂ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಪಡೆಯುವ ಕಾರ್ಕಳ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ 1092 ಮಿ.ಮೀ. ವಾಡಿಕೆ ಮಳೆಯಾಗಬೇಕು. ಈ ಅವಧಿಯಲ್ಲಿ ಶೇ. 53.26ರಷ್ಟು ಅಂದರೆ 581.7 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ 510.3 ಮಿ.ಮೀ. ಮಳೆ ಕೊರತೆಯಾಗಿದೆ. 2019ರ ಜೂನ್‌ನಲ್ಲಿ 630.2 ಮಿ.ಮೀ. ಮಳೆ ಸುರಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 48.5 ಮಿ.ಮೀ. ಮಳೆ ಖೋತಾ ಆಗಿದೆ.
ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಒಂದೆರಡು ಬಾರಿ ನೆರೆ ಬರುವುದು ವಾಡಿಕೆಯಾಗಿದೆ. ಎರಡು ವರ್ಷದ ಹಿಂದೆ ಅತಿವೃಷ್ಠಿಯಾಗಿ ಭಾರೀ ಪ್ರವಾಹ ಉಂಟಾಗಿತ್ತು. ಆದರೆ ಈ ಮಳೆಗಾಲದ ಜೂನ್ ತಿಂಗಳಲ್ಲಿ ನದಿಗಳು ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿದಿಲ್ಲ. ಈಗಾಗಲೇ ಭತ್ತದ ಕೃಷಿಯ ಸಿದ್ಧತೆಯಲ್ಲಿರುವ ಕೃಷಿಕ ಮುಂದಿನ ದಿನಗಳಲ್ಲಿ ಮಳೆ ಯಾವ ಪ್ರಮಾಣದಲ್ಲಿ ಸುರಿಯಲಿದೆ, ವರುಣ ತಮ್ಮ ಕೈಹಿಡಿಯುತ್ತಾನೊ, ಇಲ್ಲ ಬಿಡುತ್ತಾನೋ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ (ಮಿ.ಮೀ.ಗಳಲ್ಲಿ)
ತಾಲೂಕು 2019 2020 ವಾಡಿಕೆ ಮಳೆ
ಉಡುಪಿ 576.3 680.8 1033.0
ಕುಂದಾಪುರ 640.5 719.9 1041.0
ಕಾರ್ಕಳ 630.2 581.7 1092.0
ಒಟ್ಟು 625.1 670.4 1055.3
ಕಳೆದೊಂದು ವಾರದಲ್ಲಿ ಮಳೆ ನಾಪತ್ತೆ
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪ್ರವೇಶ ಭರ್ಜರಿಯಾಗಿದ್ದರೂ ನಂತರದ ದಿನಗಳಲ್ಲಿ ಕ್ಷೀಣಿಸಿತ್ತು. ಮಧ್ಯೆ ಆಗಾಗ್ಗೆ ಚುರುಕು ಪಡೆದಿದ್ದರೂ ನಿರೀಕ್ಷೆಯಂತೆ ಮಳೆ ಸುರಿದಿಲ್ಲ. ಮುಂಗಾರು ಆರಂಭದಲ್ಲಿ ಚಂಡಮಾರುತಗಳ ಪ್ರಭಾವದಿಂದ ಉತ್ತಮ ಮಳೆ ಸುರಿದಿದೆ. ತಿಂಗಳ ಕೊನೆಯಲ್ಲಿ 2-3 ದಿನಗಳ ಕಾಲ ಭಾರೀ ಮಳೆಯಾದರೂ ಅದಕ್ಕೂ ಮೊದಲು ಒಂದು ವಾರ ಮಳೆ ನಾಪತ್ತೆಯಾಗಿ ಬರಿದೇ ಬಿಸಿಲು ಕಾಣಿಸಿಕೊಂಡಿತ್ತು. ಕೆಲವೇ ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗಿದ್ದು, ಬಿಟ್ಟರೆ ಹೆಚ್ಚಿನ ದಿನಗಳು ಮಳೆಯಿಲ್ಲದೇ ಸೆಖೆಯ ವಾತಾವರಣವಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss