Thursday, July 7, 2022

Latest Posts

ಉಡುಪಿಯಲ್ಲಿ ಗುರುವಾರ ಮತ್ತೆ 29 ಮಂದಿಗೆ ಸೋಂಕು , ಈಗ 150ರ ಗಡಿಯಲ್ಲಿ ಕೋವಿಡ್

ಉಡುಪಿ: ಜಿಲ್ಲೆಯಲ್ಲಿ ನೋವೆಲ್ ಕೊರೋನಾ ವೈರಸ್ ಸೋಂಕಿಗೆ ಗುರುವಾರ ಮತ್ತೆ 29 ಮಂದಿ ತುತ್ತಾಗಿದ್ದಾರೆ. ಕಳೆದ 10 ದಿನಗಳಿಂದ ಮಹಾರಾಷ್ಟ್ರದಿಂದ ಬಂದವರಲ್ಲಿ ಅತೀ ಹೆಚ್ಚು ಸೋಂಕಿತರು ಕಂಡುಬಂದಿದ್ದು, ಏಕಾಏಕಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 150ರ ಗಡಿಯ ಹತ್ತಿರ ಬಂದು ನಿಂತಿದೆ.
ಹೊಸದಾಗಿ ಸೋಂಕು ಕಾಣಿಸಿಕೊಂಡ 29 ಜನರಲ್ಲಿ 20 ಮಂದಿ ಪುರುಷರಾದರೆ, 8 ಜನ ಮಹಿಳೆಯರಿದ್ದಾರೆ. ಇವರೊಂದಿಗೆ ಆರು ವರ್ಷ ಪ್ರಾಯದ ಒಂದು ಹೆಣ್ಣು ಮಗು ಕೂಡ ಸೇರಿದೆ. ಸರಕಾರಿ ದಿಗ್ಬಂಧನ ಕೇಂದ್ರಗಳಲ್ಲಿದ್ದವರಲ್ಲಿಯೇ ಸೋಂಕು ಪತ್ತೆಯಾಗಿದೆ. ಗರಿಷ್ಠ 23 ಮಂದಿ ಕುಂದಾಪುರ ತಾಲೂಕಿನಲ್ಲಿ, ಐದು ಜನ ಉಡುಪಿ ಮತ್ತು ಒಬ್ಬರು ಕಾರ್ಕಳ ತಾಲೂಕಿನ ದಿಗ್ಬಂಧನ ಕೇಂದ್ರದಲ್ಲಿದ್ದರು. ಎಲ್ಲರೂ ಆಯಾ ತಾಲೂಕಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅವರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಈವರೆಗೆ ಉಡುಪಿ ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ ಏಕಾಏಕಿ 149ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಬರೋಬ್ಬರಿ 124 ಮಂದಿ ಮಹಾರಾಷ್ಟ್ರ ರಾಜ್ಯದ ಸಂಪರ್ಕ ಹೊಂದಿದ್ದಾರೆ. ಇದರಲ್ಲಿ 123 ಜನ ನೇರವಾಗಿ ಅಲ್ಲಿಂದ ಬಂದವರಾಗಿದ್ದರೆ, ಒಬ್ಬರಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಉಳಿದಂತೆ ಸೋಂಕಿತರಲ್ಲಿ 11 ಜನ ದುಬೈನಿಂದ ತಾಯ್ನಾಡಿಗೆ ಮರಳಿದವರು, ತೆಲಂಗಾಣದಿಂದ ಬಂದ ಐದು ಜನರಲ್ಲಿ ಹಾಗೂ ಕೇರಳದಿಂದ ಮರಳಿದ ಮೂವರಲ್ಲಿ ಸೋಂಕು ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ನಾಲ್ವರು ಪೊಲೀಸರು, ಒಬ್ಬ ಜಿ.ಪಂ. ಸಿಬ್ಬಂದಿ ಮತ್ತು ತುಂಬು ಗರ್ಭಿಣಿಗೆ ಸೋಂಕು ಅಂಟಿದೆ.ಒಟ್ಟು ಸೋಂಕಿತ ಪೈಕಿ 34 ಮಂದಿ ಮಕ್ಕಳು ಕೂಡ ಸೇರಿದ್ದಾರೆ. ಆರು ಮಂದಿ 60 ವರ್ಷ ಪ್ರಾಯ ಮೇಲ್ಪಟ್ಟವರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss