ಉಡುಪಿ: ಕೋವಿಡ್ -19 ಸಾಂಕ್ರಮಿಕ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ನಾಲ್ಕನೇ ಬಲಿಯಾಗಿದೆ. ಬೈಂದೂರು ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಬೈಂದೂರು ತಾಲೂಕಿನ 70ವರ್ಷ ಪ್ರಾಯದ ವೃದ್ಧ ಮೃತಪಟ್ಟಿದ್ದಾರೆ. ಈ ವೃದ್ಧ ಸೋಂಕಿತ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಮಾಹಿತಿ ನೀಡಿದ್ದಾರೆ.
ಈಗಾಗಲೇ ಕೋವಿಡ್ ಸೋಂಕು ತಗುಲಿದ್ದ ಮೂವರು ಉಡುಪಿ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಮೂರು ಜನರಿಗೂ ಸಾವನ್ನಪ್ಪಿದ ಬಳಿಕ ಸೋಂಕು ದೃಢಪಟ್ಟಿತ್ತು. ಆದರೆ ಮೊದಲ ಬಾರಿ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್-19 ರೋಗಿಯೊಬ್ಬರು ಅಸುನೀಗಿದ್ದಾರೆ.