ಉಡುಪಿ: ಇಡೀ ರಾಜ್ಯದಲ್ಲಿ ಕೋವಿಡ್ -19 ಸೋಂಕು ನಿಯಂತ್ರಿಸಲು ಕರ್ನಾಟಕ ಸರಕಾರ ಹೆಣಗಾಡುತ್ತಿದೆ. ಏನೇ ಪ್ಲಾನ್ ಮಾಡಿದರೂ ರಾಜ್ಯದಲ್ಲಿ ವೈರಸ್ ಪಸರಿಸುತ್ತಲೇ ಇದೆ. ರಾಜ್ಯದ ಕೆಲ ಜಿಲ್ಲೆಗಳು ಲಾಕ್ ಡೌನ್, ಭಾಗಶಃ ಲಾಕ್ ಡೌನ್ ಮಾಡುತ್ತಿದ್ದರೆ, ಉಡುಪಿ ಜಿಲ್ಲೆ ಮಾತ್ರ ವಿಭಿನ್ನ ಪ್ರಯತ್ನದಲ್ಲಿದೆ. ಉಡುಪಿ ಜಿಲ್ಲೆಯನ್ನು 14 ದಿನಗಳ ಮೊಹರು (ಸೀಲ್) ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಧಿ ಪೀಡಿತರ ಸಂಖ್ಯೆ 1800ರ ಗಡಿಗೆ ಬಂದು ನಿಂತಿದೆ. ಸಮುದಾಯಕ್ಕೂ ವೈರಸ್ ಹಬ್ಬಲು ಆರಂಭಿಸಿದೆ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ತಪ್ಪುವ ಮೊದಲು ಅದನ್ನು ಹತೋಟಿಗೆ ತರಲು ಜಿಲ್ಲಾಡಳಿತ, ತಜ್ಞ ವೈದ್ಯರು ಮತ್ತು ಜನಪ್ರತಿನಿಧಿಗಳು ಹಳೆಯ ಕಾರ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ.
ಈಗಾಗಲೇ ಒಮ್ಮೆ ಜಾರಿಗೊಳಿಸಿ ಯಶಸ್ವಿಯಾದ ಜಿಲ್ಲಾ ಗಡಿ ಬಂದ್ ಮತ್ತೊಮ್ಮೆ ನಿನ್ನೆ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಉಡುಪಿ ಜಿಲ್ಲೆಗೆ ಉತ್ತರ ಕನ್ನಡ , ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ.
10ಕ್ಕೂ ಅಧಿಕ ಮಾರ್ಗಗಳಲ್ಲಿ ಚೆಕ್ ಪೋಸ್ಟ್
ಇಂದು ಮುಂಜಾನೆಯಿಂದ ನೆರೆಯ ನಾಲ್ಕು ಜಿಲ್ಲೆಯಿಂದ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ವಾಪಸ್ ಕಳುಹಿಸಲಾಗುತ್ತಿದೆ. ಪೊಲೀಸರು 10ಕ್ಕಿಂತಲೂ ಹೆಚ್ಚು ಗಡಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಮೂರು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ತುರ್ತು ಅಗತ್ಯ ಹೊರತುಪಡಿಸಿ ಯಾವುದೇ ವಾಹನಗಳನ್ನು ಉಡುಪಿ ಜಿಲ್ಲೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.|
ಉಡುಪಿ ಜಿಲ್ಲಾಡಳಿತ ಸರಕು ಸಾಮಗ್ರಿ, ಅಗತ್ಯ ವಸ್ತು, ಹಣ್ಣು ತರಕಾರಿ ಹಾಲು ದಿನಸಿ ಮುಂತಾದ ವಾಹನಗಳಿಗೆ ಮಾತ್ರ ವಿನಾಯಿತಿ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 20ಕ್ಕಿಂತಲೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಇರುವುದರಿಂದ ಸುತ್ತಮುತ್ತಲ ಜಿಲ್ಲೆಗಳಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ವಿನಾಯಿತಿಯನ್ನು ಕೊಡಲಾಗಿದೆ. ಜಿಲ್ಲೆಯ ಒಳಗೆ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ನಿರ್ಬಂಧಿಸಲಾಗಿದೆ. ಜಿಲ್ಲೆಯ ಗಡಿಯನ್ನು ಸೀಲ್ ಮಾಡಲಾಗಿದೆ.
ದ.ಕ. ಜಿಲ್ಲೆಯ ಗಡಿಯಾದ ಹೆಜಮಾಡಿ ಮತ್ತು ಜಾರಿಗೆ ಕಟ್ಟೆಯಲ್ಲಿ, ಕಾರ್ಕಳದ ಬಜಗೋಳಿ ಮತ್ತು ಸಾಣೂರಿನಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಶಿವಮೊಗ್ಗ ಗಡಿಯನ್ನು ಸೋಮೇಶ್ವರ, ಹೊಸಂಗಡಿ ಮತ್ತು ಕೊಲ್ಲೂರಿನಲ್ಲಿ ಬಂದ್ ಮಾಡಲಾಗಿದೆ. ಚಿಕ್ಕಮಗಳೂರು ಗಡಿಯನ್ನು ಮಾಳದಲ್ಲಿ ಹಾಗೂ ಉ.ಕ. ಗಡಿಯನ್ನು ಬೈಂದೂರಿನ ಶಿರೂರಿನಲ್ಲಿ ತಡೆಹಿಡಿಯಲಾಗಿದೆ.
ಈ ಮಾರ್ಗಗಳ ಮೂಲಕ ಜಿಲ್ಲೆಯೊಳಗೆ ಬರುವ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದೆ. ಬರುವವರನ್ನು ಗಡಿಯಲ್ಲಿ ನಿಲ್ಲಿಸಿ, ಅನಗತ್ಯವೆಂದು ಕಂಡರೆ ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತಿದೆ. ಅನಿವಾರ್ಯವಾಗಿ ಕೆಲಸ ಕಾರ್ಯಗಳಿಗೆ ದಿನನಿತ್ಯ ಬಂದು ಹೋಗುವವರಿಗೆ ಜಿಲ್ಲಾಡಳಿತದಿಂದ ಇನ್ನೂ ಪಾಸ್ ವ್ಯವಸ್ಥೆ ಆಗದೇ ಇರುವುದರಿಂದ ಗುರುತು ಚೀಟಿ ನೋಡಿ ಅವಕಾಶ ನೀಡಲಾಗುತ್ತಿದೆ.