ಉಡುಪಿ: ಜಿಲ್ಲೆಯಿಂದ ಮೊದಲ ಶ್ರಮಿಕ್ ರೈಲು ಇಂದು ಉತ್ತರ ಪ್ರದೇಶಕ್ಕೆ ಹೊರಡಲಿದೆ. ಸುಮಾರು 1500 ಮಂದಿಯನ್ನು ಹೊತ್ತ ರೈಲು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಸಂಜೆ 5 ಗಂಟೆ ಹೊರಡುತ್ತದೆ ಎಂದು ಉಡುಪಿ ತಹಶೀಲ್ದಾರ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 2ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದ ಹೊರಗೆ ತೆರೆದ ಕೌಂಟರ್ ಗಳಲ್ಲಿ ಟಿಕೆಟ್ ನೋಂದಣಿ ಶುರುವಾಗಲಿದೆ. ಈಗಾಗಲೇ ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ಇ-ಪಾಸ್ ಹೊಂದಿರುವ ಉತ್ತರ ಪ್ರದೇಶ ರಾಜ್ಯದ ಜನರು ಈ ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಪಡೆದುಕೊಳ್ಳಲಿದ್ದಾರೆ.
ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ವಲಸೆ ಕಾರ್ಮಿಕರು ನೇರವಾಗಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಟಿಕೆಟ್ ಪಡೆಯಬೇಕು. ಕುಂದಾಪುರ ಮತ್ತು ಬೈಂದೂರು ಹಾಗೂ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಇ-ಪಾಸ್ ಪಡೆದಿರುವವರು ಬಸ್ಸುಗಳಲ್ಲಿ ನೇರವಾಗಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಬರಲಿದ್ದಾರೆ. ಇಲ್ಲಿ ಟಿಕೆಟ್ ಪಡೆದು ರೈಲು ಹತ್ತಲಿದ್ದಾರೆ.
ಒಬ್ಬರಿಗೆ 933 ರೂ. ಪ್ರಯಾಣ ದರ
ಎರಡು ಸಾವಿರಕ್ಕೂ ಅಧಿಕ ಕಿ.ಮೀ. ದೂರವಿರುವ ಉತ್ತರ ಪ್ರದೇಶಕ್ಕೆ ಉಡುಪಿಯಿಂದ ನೇರ ರೈಲು ಕಳುಹಿಸಲು 14 ಲಕ್ಷ ರೂ. ವೆಚ್ಚ ತಗುಲಲಿದೆ. ರೈಲಿನಲ್ಲಿ 1500 ಮಂದಿ ತೆರಳುತ್ತಿರುವುದರಿಂದ ಒಬ್ಬರಿಗೆ ತಲಾ 933 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಉತ್ತರ ಪ್ರದೇಶಕ್ಕೆ ತೆರಳುವವರಿಗೆ ಜಿಲ್ಲಾಡಳಿತದ ವತಿಯಿಂದ ಫುಡ್ ಪ್ಯಾಕೆಟ್ ನೀಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಅವರವರೇ ಮಾಡಿಕೊಳ್ಳಬೇಕಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾಹಿತಿ ನೀಡಿದ್ದಾರೆ.