ಹೊಸದಿಗಂತ ವರದಿ, ಉಡುಪಿ:
ಜಿಲ್ಲೆಯ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೊದಲ ಹಂತದ ಚುನಾವಣೆಗೆ ಅಧಿಕೃತ ಅಧಿಸೂಚನೆಯನ್ನು ಜಿಲ್ಲಾ ಚುನಾವಣಾಧಿಕಾರಿಯವರು ನಾಳೆ ಹೊರಡಿಸುತ್ತಾರೆ. ಈ ಮಧ್ಯೆ ಜಿಲ್ಲೆಯ 154 ಗ್ರಾ.ಪಂ.ಗಳ ಬದಲಿಗೆ 153 ಪಂಚಾಯತ್ಗಳಿಗಷ್ಟೇ ಚುನಾವಣೆ ನಡೆಯಲಿದೆ.
ಹೌದು, ಉಡುಪಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ಗಳಿವೆ. ಈ ಪೈಕಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾ.ಪಂ.ಗೆ 2018ರಲ್ಲಿ ಚುನಾವಣೆ ನಡೆದಿರುವುದರಿಂದ ಉಳಿದ 154 ಗ್ರಾ.ಪಂ.ಗಳಿಗೆ ರಾಜ್ಯ ಚುನಾವಣಾ ಆಯೋಗ ನ. 30ರಂದು ಚುನಾವಣೆ ಘೋಷಿಸಿತ್ತು. ಇದೀಗ ಚುನಾವಣಾ ಆಯೋಗ ಪರಿಷ್ಕೃತ ನಡವಳಿ ಹೊರಡಿಸಿದ್ದು, ಇದರಲ್ಲಿ ಜಿಲ್ಲೆಯ ಇನ್ನೊಂದು ಪಂಚಾಯತ್ ಅನ್ನು ಸಾರ್ವತ್ರಿಕ ಚುನಾವಣೆಯಿಂದ ಕೈ ಬಿಟ್ಟಿದೆ.
ಹೊಸಾಡು ಗ್ರಾ.ಪಂ.ಗೆ ಇಲ್ಲ ಚುನಾವಣೆ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತನ್ನು ಚುನಾವಣೆಯಿಂದ ಕೈ ಬಿಡಲಾಗಿದೆ. ಹೊಸಾಡು ಗ್ರಾಮ ಪಂಚಾಯತ್ಗೆ ಸೇನಾಪುರ ಗ್ರಾಮವನ್ನು ಸೇರ್ಪಡೆಗೊಳಿಸಿದ್ದನ್ನು ಪ್ರಶ್ನಿಸಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲಾಗಿದೆ. ಆ ಮೇಲ್ಮನವಿ ಸದ್ಯ ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಹೊಸಾಡು ಪಂಚಾಯತ್ಗೆ ಚುನಾವಣೆ ನಡೆಯುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಇದರೊಂದಿಗೆ ಹೊಸ ಪಟ್ಟಣ ಪಂಚಾಯತ್ ರಚಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ, ಮೆನ್ನಬೆಟ್ಟು ಮತ್ತು ಕಟೀಲು ಗ್ರಾ.ಪಂ.ಗಳನ್ನು ಕೂಡ ಚುನಾವಣೆಯಿಂದ ಹೊರಗಿಟ್ಟು ಚುನಾವಣಾ ಆಯೋಗ ಆದೇಶಿಸಿದೆ.