Wednesday, June 29, 2022

Latest Posts

ಉಡುಪಿ| ಆಘಾತ ನೀಡುತ್ತಿದೆ ಅಪಘಾತಗಳ ಅಂಕೆ: ವರ್ಷಾರಂಭದಲ್ಲಿಯೇ 17 ಪ್ರಕರಣಗಳು

ರಕ್ಷಿತ್ ಬೆಳಪು

ಹೊಸದಿಗಂತ ವರದಿ,ಕುಂದಾಪುರ:

ಅಪಘಾತ ಪ್ರಕರಣಗಳು ದಿನ ಕಳೆದಂತೆ ಏರಿಕೆಯಾಗ ತೊಡಗಿದ್ದು, ಅಪಘಾತದಲ್ಲಿ ಮರಣ ಹೊಂದುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. 22 – 40 ವರ್ಷದ ತರುಣರು ಹಾಗೂ ಮಧ್ಯ ವಯಸ್ಕರು ಅಪಘಾತದಲ್ಲಿ ಉಸಿರು ಚೆಲ್ಲುತ್ತಿರುವುದು ದುರದೃಷ್ಟ.
ಈ ವರ್ಷದ (2021) ಆರಂಭದಲ್ಲಿಯೇ ಉಡುಪಿ ಜಿಲ್ಲೆಯಲ್ಲಿ 17 ಅಪಘಾತ ಪ್ರಕರಣಗಳು ದಾಖಲಾಗಿದ್ದು 06 ಜನ ಮೃತಪಟ್ಟಿದ್ದಾರೆ. 16 ಜನ ಗಾಯಾಳುವಾಗಿದ್ದಾರೆ. ಜನವರಿ ನಾಲ್ಕರೊಳಗೆ ಇಷ್ಟೊಂದು ಅಪಘಾತ ಪ್ರಕರಣಗಳು ದಾಖಲಾಗಿದೆ.

ಉಸಿರು ನಿಲ್ಲಿಸುತ್ತಿದೆ ನಿರ್ಲಕ್ಷ್ಯ: ದ್ವಿಚಕ್ರ ವಾಹನ ಹಾಗೂ ಕಾರನ್ನು ಚಲಾಯಿಸುವಾಗ ನಾವು ಮಾಡುವ ನಿರ್ಲಕ್ಷ್ಯ ನಮ್ಮ ಪ್ರಾಣಕ್ಕೆ ಕುತ್ತು ತರುವುದಲ್ಲದೇ ಇತರ ವ್ಯಕ್ತಿಗಳ ಜೀವಕ್ಕೆ ಕಂಟಕ ತಂದಿಡುತ್ತದೆ. ಅತಿ ವೇಗದ ವಾಹನ ಚಾಲನೆ, ವಾಹನದೊಂದಿಗೆ ಕ್ರೇಝ್ ಗಾಗಿ ಮಾಡುವ ವಿಲೀಂಗ್ ಗಳು ಅಮ್ಮನಿಗೆ ಮಗ ಇಲ್ಲದಂತೆ ಮಾಡಿದರೆ ಮತ್ಯಾರದೋ ಗಂಡನನ್ನೋ, ಅಪ್ಪನನ್ನೋ, ತಮ್ಮನನ್ನು ಕಿತ್ತುಕೊಂಡು ಬಿಡುತ್ತದೆ.

2020ರ ಜನವರಿಯಿಂದ ಡಿಸೆಂಬರ್ ವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 173 ಮಾರಣಾಂತಿಕ ಅಪಘಾತ ಪ್ರಕರಣಗಳು ದಾಖಲಾಗಿದ್ದು, 192 ಮಂದಿ ಉಸಿರು ಕೊನೆಗೊಳಿಸಿದ್ದಾರೆ. 817 ಅಪಘಾತಗಳಾಗಿದ್ದು 1,092 ಮಂದಿ ಗಾಯಾಳುಗಳಾಗಿದ್ದಾರೆ. 2020ರ ಜನವರಿ ತಿಂಗಳಲ್ಲಿ ಒಟ್ಟು 119 ಪ್ರಕರಣಗಳಲ್ಲಿ 17 ಜನ ಮೃತ ಪಟ್ಟು 118 ಜನ ಗಾಯಾಳುಗಳಾಗಿದ್ದರು.

ತಿಂಗಳಿಗೆ 14% ಅಪಘಾತ: ಪ್ರತಿ ತಿಂಗಳೊಂದರಲ್ಲಿ ಸರಾಸರಿ 14%ರಂತೆ ಅಪಘಾತ ಪ್ರಕರಣಗಳು ಉಡುಪಿ ಜಿಲ್ಲೆಯಾದ್ಯಂತ ದಾಖಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ವಂತ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ವಾಹನ ದಟ್ಟನೆಯಿಂದ ಟ್ರಾಫಿಕ್ ಜಾಮ್ ಸಂದರ್ಭದಲ್ಲಿ ಉಂಟಾಗುವ ಗೊಂದಲದಿಂದ ಅಪಘಾತಗಳು ಸಂಭವಿಸುತ್ತದೆ.

ಪ್ರಾಣ ಉಳಿಸಿದ ಲಾಕ್‌ಡೌನ್: ಕೊರೋನಾ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್ ಡೌನ್‌ನಿಂದಾಗಿ ಹಲವರ ಪ್ರಾಣ ಉಳಿದಿದೆ. ಮಾರ್ಚ್  ಕೊನೆಯ ವಾರದಲ್ಲಿ ಲಾಕ್‌ಡೌನ್ ಆರಂಭವಾದ ನಂತರ ಲಾಕ್ ಡೌನ್ ಮುಕ್ತಾಯವಾಗುವವರೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಪಘಾತಗಳು ವರದಿಯಾಗಿದೆ. 2020 ರ ಮಾರ್ಚ್ ನಲ್ಲಿ 14, ಎಪ್ರಿಲ್ 7, ಜೂನ್ 12, ಜುಲೈ 8, ಆಗಸ್ಟ್ 17 ಅಪಘಾತ ಪ್ರಕರಣಗಳು ದಾಖಲಾಗಿದ್ದವು.

ಅಸಮರ್ಪಕ ದೀಪದ ವ್ಯವಸ್ಥೆಯೂ ಕಾರಣ: ಕಳೆದ ಹತ್ತು ಹದಿನೈದು ದಿನದಿಂದ ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಬೈಂದೂರು ಕುಂದಾಪುರ ವ್ಯಾಪ್ತಿಯಲ್ಲಿ ಅಪಘಾತ ಸಂಖ್ಯೆ ಕಡಿಮೆ ಇಲ್ಲ.  2021ರ 3 ದಿನದಲ್ಲಿ 3 ಅಪಘಾತ ಸಂಭವಿಸಿದೆ. ಹೆದ್ದಾರಿ ಜಂಕ್ಷನ್‌ಗಳಲ್ಲಿ ಅಸಮರ್ಪಕ ದೀಪದ ವ್ಯವಸ್ಥೆ ಕೂಡಾ ಅಪಘಾತಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಆಂಬುಲೆನ್ಸ್ ಚಾಲಕರಾದ ಇಬ್ರಾಹಿಂ ಎಂ.ಎಚ್. ಗಂಗೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss