Thursday, August 11, 2022

Latest Posts

ಉಡುಪಿ| ಇಂದು ಏಳು ಮಂದಿಯಲ್ಲಿ ವೈರಸ್ ಪತ್ತೆ: ಜಿಲ್ಲೆಯಲ್ಲೀಗ ಇಳಿಮುಖವಾಗುತ್ತಿದೆ ಕೊರೋನಾ ಪ್ರಕರಣ

ಉಡುಪಿ: ಜಿಲ್ಲೆಯಲ್ಲೀಗ ಕೋವಿಡ್-19 ಸೋಂಕಿತ ದೃಢ ಪ್ರಕರಣಗಳ ಸಂಖ್ಯೆ ತಗ್ಗಿದೆ. ಮಂಗಳವಾರ ಏಳು ಮಂದಿಯಲ್ಲಿ ನೋವೆಲ್ ಕೊರೋನಾ ವೈರಸ್ ಪತ್ತೆಯಾಗಿದೆ.
ಸೋಂಕಿತ ಏಳು ಮಂದಿಯೂ ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಇವರಲ್ಲಿ ಆರು ಮಂದಿ ವಿಶೇಷ ಪ್ರವರ್ಗದವರರಾಗಿದ್ದಾರೆ. ನಾಲ್ವರು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದರೆ, ಇಬ್ಬರು 10 ವರ್ಷದೊಳಗಿನ ಮಕ್ಕಳು. ಒಬ್ಬರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ.
ನಾಲ್ವರು ಪುರುಷರು, ಇಬ್ಬರು ಮಕ್ಕಳು ಮತ್ತು ಓರ್ವ ಸೋಂಕಿತ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಮನೆಯನ್ನು ನಿಯಂತ್ರಿತ ವಲಯವನ್ನಾಗಿ ಗುರುತಿಸುವ ಕೆಲಸ ನಡೆಯುತ್ತಿದೆ.
ಸಾವಿರದ ಸನಿಹದಲ್ಲಿ ಮಹಾರಾಷ್ಟ್ರದ ಸೋಂಕಿತರು
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ 19 ಸೋಂಕಿತರ ಒಟ್ಟು ಸಂಖ್ಯೆ 1035ಕ್ಕೆ ತಲುಪಿದೆ. ಈ ಪೈಕಿ 992 ಮಂದಿ ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದ ಸೋಂಕಿತರ ಸಂಖ್ಯೆ ಸಾವಿರಕ್ಕೆ ಸಮೀಪಿಸುತ್ತಿದೆ. ಉಳಿದಂತೆ ದುಬೈ, ಕತಾರ್, ತೆಲಂಗಾಣ, ಕೇರಳ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಗೋವಾದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸ್ಥಳೀಯವಾಗಿ ಉಡುಪಿ ಜಿಲ್ಲೆಯ 18 ಮಂದಿಗೆ ವೈರಸ್ ಹರಡಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
ಉಡುಪಿ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದರಯು ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಲೇ ಇವೆ. ಮಂಗಳವಾರ ಜಿಲ್ಲೆಯಲ್ಲಿರುವ ಕೋವಿಡ್ -19 ಸೋಂಕು ಸಕ್ರಿಯವಾಗಿರುವವರು 147 ಮಂದಿ ಮಾತ್ರ. ಈವರೆಗೆ 885 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss