Monday, June 27, 2022

Latest Posts

ಉಡುಪಿ| ಉಚಿತ ಬಸ್ ಸಂಚಾರ ವ್ಯವಸ್ಥೆ: ಉಡುಪಿ ನಾಗರಿಕರು ಫುಲ್ ಖುಷ್!

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಿರುವ ಉಚಿತ ಬಸ್ಸು ಸಂಚಾರ ಸೇವೆಗೆ ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೂರು ದಿನಗಳಲ್ಲಿ 10ಸಾವಿರಕ್ಕೂ ಅಧಿಕ ಮಂದಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ.

ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಟ್ರಸ್ಟ್ ವತಿಯಿಂದ ಸಿಟಿ ಬಸ್ಸು ಮಾಲಕರ ಸಹಯೋಗದೊಂದಿಗೆ ಈ ಉಚಿತ ಸಿಟಿ ಬಸ್ಸು ಓಡಾಟ ವ್ಯವಸ್ಥೆ ಮಾಡಲಾಗಿದೆ. ಆರಂಭದ ಎರಡು ದಿನಗಳಲ್ಲಿ ಆಯ್ದ 7 ಮಾರ್ಗಗಳಲ್ಲಿ 12 ಬಸ್ಸುಗಳು ಓಡಾಟ ನಡೆಸಿವೆ. ಕ್ರಮವಾಗಿ ಮೊದಲ ದಿನ 2115 ಮತ್ತು ಎರಡನೇ ದಿನ 3432 ಜನ ಪ್ರಯಾಣಿಕರು ಈ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಮೂರನೇ ದಿನವಾದ ಬುಧವಾರ 4819 ಪ್ರಯಾಣಿಕರು ಪ್ರಯಾಣಿಸಿದ್ದು, ಇನ್ನೂ ಹೆಚ್ಚಿನ ಭಾಗಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಬ್ರಹ್ಮಾವರ – ನಾಲ್ಕೂರು ಭಾಗಕ್ಕೆ ಒಂದು ಬಸ್ಸು ಹೆಚ್ಚಿಸಲಾಗಿದೆ. ಒಟ್ಟು 13 ಬಸ್ಸುಗಳನ್ನು ಓಡಿಸಲಾಗುತ್ತಿದೆ.

ಶನಿವಾರದ ವರೆಗೆ ಈ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಡುಪಿ ನಾಗರಿಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿ ಹೆಚ್ಚಿನ ಬಸ್ಸು ವ್ಯವಸ್ಥೆಗೊಳಿಸಲು ಚಿಂತನೆ ನಡೆಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಮಂಜುನಾಥ್ ಮಣಿಪಾಲ, ಯೋಗೀಶ್ ಸಾಲ್ಯಾನ್, ಸುಂದರ ಕಲ್ಮಾಡಿ, ಟಿ. ಜಿ. ಹೆಗ್ಡೆ, ಅಶೋಕ್ ನಾಯ್ಕ್, ಸಂತೋಷ್ ಜತ್ತನ್ನ, ಕ್ಷೇತ್ರ ಬಿಜೆಪಿ ಸಮಿತಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಯುವ ಮೋರ್ಚಾ ನಗರ ಅಧ್ಯಕ್ಷ ರೋಶನ್ ಶೆಟ್ಟಿ, ತಾ.ಪಂ. ಸದಸ್ಯ ರಾಜೇಂದ್ರ ಪಂದುಬೆಟ್ಟು, ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ವಿಶು ಕಲ್ಯಾಣಪುರ ಸ್ಥಳದಲ್ಲೇ ಇದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ಬಸ್ಸು ಸಂಚರಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss