ಉಡುಪಿ: ನಗರದ ಸರ್ವಿಸ್ ಬಸ್ಸು ನಿಲ್ದಾಣದಲ್ಲಿನ ಎರಡು ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಸಂಪೂರ್ಣ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.
ಉಡುಪಿ ನಗರದ ಸರ್ವಿಸ್ ಬಸ್ಸು ನಿಲ್ದಾಣದಲ್ಲಿನ ನಗರಸಭಾ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ರಘುನಾಥ್ ರಾವ್ ಎಂಬವರಿಗೆ ಸೇರಿದ ಮಲ್ಲಿಕಾರ್ಜುನ ಸ್ಟೋರ್ಸ್ ಮತ್ತು ಮೊಬೈಲ್ ಕೇರ್ ಎಂಬ ಅಂಗಡಿಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ. ಪರಿಣಾಮ ಅಂಗಡಿಗಳಲ್ಲಿರುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಘಟನೆಯಿಂದ ಸುಮಾರು 3.5ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಸಹಕರಿಸಿದೆ.
ಸ್ಥಳಕ್ಕೆ ನಗರಸಭಾ ಸದಸ್ಯ ಟಿ.ಜಿ. ಹೆಗ್ಡೆ, ಉದ್ಯಮಿ ಕೆ. ಉದಯ ಕುಮಾರ್ ಶೆಟ್ಟಿ, ನಗರಸಭೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.