ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶದ ಪ್ರಕಾರ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಉಡುಪಿಗೆ ಬರಲು ಒಂದು ಬಾರಿಯ ಅನುಮತಿ ಪಡೆದು ಸೋಮವಾರ ಒಟ್ಟು 1048 ಮಂದಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.
ಜಿಲ್ಲಾ ಗಡಿಪ್ರದೇಶದಲ್ಲಿ ಜಿಲ್ಲೆಯನ್ನು ಸಂಪರ್ಕಿಸುವ 9 ಕಡೆಗಳಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ ಚೆಕ್ಪೋಸ್ಟ್ಗಳಲ್ಲಿ ಖುದ್ದಾಗಿ ವೈದ್ಯರು ಇದ್ದುಕೊಂಡೇ ಕಾರ್ಯನಿರ್ವಹಣೆ ನಡೆಯುತ್ತಿದೆ. ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನು ಕೂಲಂಕಷವಾಗಿ ಪರಿಶೀಲಿಸಿ ದೈಹಿಕ ಆರೋಗ್ಯ ತಪಾಸಣೆ ನಡೆಸಿ, ಒಳಗೆ ಬಿಡಲಾಗುತ್ತಿದೆ. ಅವರು ಆಗಮಿಸಿದ ಸ್ಥಳ ಮತ್ತು ಅವರ ದೈಹಿಕ ಸ್ಥಿತಿಗನುಗುಣವಾಗಿ ದಿಗ್ಬಂಧನದ ಮೊಹರು ಹಾಕಲಾಗುತ್ತಿದೆ.
ಸೋಮವಾರ ತೆಲಂಗಾಣ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 34 ಮಂದಿಯನ್ನು ಬೈಂದೂರಿನಲ್ಲಿ ಸರಕಾರಿ ದಿಗ್ಬಂಧನದಲ್ಲಿರಿಸಲಾಗಿದೆ. ತೆಲಂಗಾಣ ರಾಜ್ಯದ ಆಯುಕ್ತರ ಅನುಮತಿ ಪಡೆದುಕೊಂಡು ಬಂದ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ 34 ಮಂದಿ ಜಿಲ್ಲೆಯ ಶಿರೂರು ಗಡಿಯಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಚೆಕ್ಪೋಸ್ಟ್ನಲ್ಲಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬಳಿಕ ಸರಕಾರಿ ದಿಗ್ಬಂಧನಕ್ಕೆ ಕಳುಹಿಸಿದ್ದು, ಬೈಂದೂರಿನ ಆಶ್ರಮ ಶಾಲೆಯಲ್ಲಿ 18 ಹಾಗೂ ಅಂಬಿಕಾ ಲಾಡ್ಜ್ನಲ್ಲಿ 16 ಮಂದಿಯನ್ನು ದಿಗ್ಬಂಧನದಲ್ಲಿರಿಸಲಾಗಿದೆ. ಲಾಡ್ಜ್ನ ವೆಚ್ಚವನ್ನು ಅಲ್ಲಿ ತಂಗಿದವರೇ ಭರಿಸಲಿದ್ದಾರೆ ಎಂದು ಬೈಂದೂರು ತಹಶೀಲ್ದಾರ್ ತಿಳಿಸಿದ್ದಾರೆ.