ಉಡುಪಿ: ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಒಂದು ಟನ್ ಅಕ್ಕಿ ಮತ್ತು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ದಾನಿಗಳ ಸಹಾಯದಿಂದ ಸಂಗ್ರಹಿಸಿದ 60 ಸಾವಿರ ರೂ. ವೌಲ್ಯದ ದಿನಸಿ ವಸ್ತುಗಳನ್ನು ಉದ್ಯಾವರ ಗ್ರಾ.ಪಂ. ಸದಸ್ಯರು ಮತ್ತು ವಾರ್ಡ್ ಅಧ್ಯಕ್ಷರ ಮೂಲಕ ಅಗತ್ಯವಿರುವ 200 ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ಕಾಪು ಕ್ಷೇತ್ರದಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಬದ್ಧರಿದ್ದು, ವಲಸೆ ಕಾರ್ಮಿಕರಿಗೆ, ಅಗತ್ಯವಿರುವವರಿಗೆ ಅಕ್ಕಿ ಸಹಿತ ದಿನೋಪಯೋಗಿ ವಸ್ತುಗಳನ್ನು ನೀಡಿ ಸಹಕಾರ ನೀಡುತ್ತಿದ್ದೇವೆ. ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮೀಣ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಆಡಳಿತವಿರುವ ಪಂಚಾಯತ್ಗಳ ನೇತೃತ್ವದಲ್ಲಿ ಜಾತಿ, ಮತ ಮತ್ತು ಪಕ್ಷ ಭೇದವಿಲ್ಲದೆ ಹಾಲು ತರಕಾರಿ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 12ಸಾವಿರ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ಕುಮಾರ್, ಲಾರೆನ್ಸ್ ಡೇಸಾ ಉಪಸ್ಥಿತರಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.