Thursday, August 11, 2022

Latest Posts

ಉಡುಪಿ | ಕೃಷ್ಣಮಠದಲ್ಲಿ ‌ನಾಡಿದ್ದು ಇಲ್ಲ ಅಷ್ಟಮಿ, ಸೆ. 10ಕ್ಕೆ ಜನ್ಮಾಷ್ಟಮಿ, 11ಕ್ಕೆ ಕೃಷ್ಣ ಲೀಲೋತ್ಸವ

ಉಡುಪಿ: ನಾಡಿನಾದ್ಯಂತ ಆ. 11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಇದ್ದರೆ, ಕಡೆಗೋಲ ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಗೌಜಿ ಇರುವುದಿಲ್ಲ. ಕೃಷ್ಣಮಠದಲ್ಲಿ ಸೆಪ್ಟೆಂಬರ್ 10ರಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ.
ಹೌದು, ಈ ಬಾರಿ ಎರಡು ಜನ್ಮಾಷ್ಟಮಿಗಳಿವೆ. ಆ. 11ರಂದು ಚಾಂದ್ರಮಾನ ಕೃಷ್ಣಾಷ್ಟಮಿಯಾದರೆ ಸೆ. 10ರಂದು ಸೌರಮಾನ ಪಂಚಾಂಗದ ಪ್ರಕಾರ ಕೃಷ್ಣ ಜನ್ಮಾಷ್ಟಮಿ. ಉಡುಪಿಯಲ್ಲಿ ಸೌರಮಾನ ಪಂಚಾಂಗವನ್ನು ಅನುಸರಿಸುವುದರಿಂದ ಶ್ರೀಕೃಷ್ಣಮಠದಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ ಎಂದು ಕೃಷ್ಣಮಠದ ಕೊಠಾರಿ ತಿಳಿಸಿದ್ದಾರೆ.
ಕೃಷ್ಣಮಠಕ್ಕೆ ಕರಾವಳಿ ಮಾತ್ರವಲ್ಲದೇ ನಾಡಿನಾದ್ಯಂತ ಭಕ್ತರಿದ್ದಾರೆ. ಅಷ್ಟಮಿಯ ಪರ್ವಕಾಲದಲ್ಲಿ ಅವರು ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುತ್ತಾರೆ. ಈ ವೇಳೆ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಹಿಂದೆ ಕೃಷ್ಣಮಠದಲ್ಲಿ ಎರಡೂ ಅಷ್ಟಮಿಗಳನ್ನು ಆಚರಿಸಲಾಗುತ್ತಿತ್ತು. ಮಠದ ತುಳಸೀ ವೃಂದಾವನದಲ್ಲಿ ಚಂದ್ರನಿಗೆ ಕ್ಷೀರ ಅರ್ಘ್ಯ ಅರ್ಪಣೆಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿತ್ತು.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಇನ್ನೂ ಕೃಷ್ಣಮಠ ಸಾರ್ವಜನಿಕರು, ಭಕ್ತರ ಪ್ರವೇಶಕ್ಕೆ ಮುಕ್ತವಾಗಿಲ್ಲ. ಇದರಿಂದ ಮಠಕ್ಕೆ ಯಾವುದೇ ಭಕ್ತರು ಬರುವುದಿಲ್ಲ. ಹಾಗಾಗಿ ಈ ಬಾರಿ ಎರಡು ಅಷ್ಟಮಿ ಆಚರಿಸುವುದಿಲ್ಲ ಎಂದು ಮಠದ ಶ್ರೀರಮಣ ತಿಳಿಸಿದ್ದಾರೆ.
ಕೃಷ್ಣಮಠದಲ್ಲಿ ಸೆ. 10ರಂದು ಮಧ್ಯರಾತ್ರಿ 12.15 ಗಂಟೆಗೆ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಸೆ. 11 ರಂದು ಶ್ರೀಕೃಷ್ಣ ಲೀಲೋತ್ಸವ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss