ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕರಾಯದ ಕೊರೋನಾ ಸೋಂಕಿತ 21ರ ಹರೆಯದ ಯುವಕ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಡುಬಂದ 12 ಪ್ರಕರಣಗಳ ಪೈಕಿ 5 ಮಂದಿ ಗುಣಮುಖರಾಗಿ ಮನೆ ಸೇರಿದಂತಾಗಿದೆ.
ಕರಾಯದ ನಿವಾಸಿ 20ರ ಹರೆಯದ ಯುವಕ ಮಾ.21 ರಂದು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಕರಾಯಕ್ಕೆ ಬಂದಿದ್ದರು. ಮಾ.24 ಕ್ಕೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಯುವಕನ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಎರಡು ಬಾರಿಯು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖ ಎಂದು ಘೋಷಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಕೊರೋನಾದಿಂದ ಗುಣಮುಖರಾದ ಭಟ್ಕಳದ ಓರ್ವ ಹಾಗೂ ಕಾಸರಗೋಡಿನ ಮೂರು ಮಂದಿ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು
ಉಡುಪಿ, ಕೊಡಗು ಕೊರೋನಾ ಮುಕ್ತ
ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲೂ ಯಾವುದೇ ಹೊಸ ಕೊರೋನಾ ಪ್ರಕರಣ ದಾಖಲಾಗಿಲ್ಲ. ಈ ಎರಡೂ ಜಿಲ್ಲೆಗಳು ಕೊರೋನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.