Thursday, July 7, 2022

Latest Posts

ಉಡುಪಿ| ‘ಕೊರೋನಾ’ ಸಂಕಷ್ಟದಲ್ಲಿರುವ ಸವಿತಾ ಸಮಾಜದ 2000 ಮಂದಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿಟ್‌

ಉಡುಪಿ: ನೋವೆಲ್ ಕೊರೋನಾ ವೈರಸ್‌ನಿಂದ ಸಂಕಷ್ಟದಲ್ಲಿರುವ ಉಡುಪಿ ಜಿಲ್ಲೆಯ ಸವಿತಾ ಸಮಾಜದ 2000 ಮಂದಿಗೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಜಿಲ್ಲಾಡಳಿತ ಮೂಲಕ ಉಚಿತ ಆಹಾರದ ಕಿಟ್‌ಗಳನ್ನು ಉಡುಪಿ ತಾಲೂಕು ಕಚೇರಿಯಲ್ಲಿ ಭಾನುವಾರ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿಸ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಜನತೆ ಲಾಕ್‌ಡೌನ್ ಅವಧಿಯಲ್ಲಿ ಕಾನೂನುಗಳನ್ನು ಯಶಸ್ವಿಯಾಗಿ ಪಾಲನೆ ಮಾಡಿದ್ದರಿಂದ ಉಡುಪಿ ಜಿಲ್ಲೆ ಇಂದು ಹಸಿರು ವಲಯದಲ್ಲಿದೆ. ಜಿಲ್ಲೆಯಲ್ಲಿದ್ದ ಸುಮಾರು 20ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ, ನಿರಾಶ್ರಿತರಿಗೆ ದಾನಿಗಳ ನೆರವಿನಿಂದ ಪ್ರತಿದಿನ ಆಹಾರ ವಿತರಿಸಲಾಗಿದೆ. ಯಾವೊಬ್ಬ ಕಾರ್ಮಿಕ ಕೂಡ ಹಸಿವೆಯಿಂದ ಬಳಲುವುದಕ್ಕೆ ಬಿಟ್ಟಿಲ್ಲ. ಸಂಕಷ್ಟದಲ್ಲಿದ್ದ ಕಾರ್ಮಿಕರು, ರಿಕ್ಷಾ ಚಾಲಕರು, ಮೀನುಗಾರರ ಮಹಿಳೆಯರಿಗೆ ಉಚಿತ ಆಹಾರದ ಕಿಟ್ ವಿತರಿಸುವಲ್ಲಿ ಜಿಲ್ಲೆಯ ದಾನಿಗಳ ಕೊಡುಗೆ ಅಮೂಲ್ಯ ಎಂದು ಶ್ಲಾಘಿಸಿದರು.

ಆಹಾರದ ಕಿಟ್ ವಿತರಿಸಿ ಮಾತನಾಡಿದ ಉದ್ಯಮಿ ಜಿ.ಶಂಕರ್, ಕೊರೋನಾ ಆರಂಭವಾದ ಕೂಡಲೇ ಜಿಲ್ಲಾಡಳಿತ ಮನವಿ ಮೇರೆಗೆ ಅಗತ್ಯವಿರುವ ಮಾಸ್ಕ್ ಮತ್ತು ಪಿಪಿಇ ಕಿಟ್ ಸೇರಿದಂತೆ ಆರೋಗ್ಯ ಇಲಾಖೆಗೆ ಅಗತ್ಯವಿದ್ದ ಸಾಮಗ್ರಿಗಳನ್ನು ತಮ್ಮ ಟ್ರಸ್ಟ್ ವತಿಯಿಂದ ನೀಡಿದ್ದು, ಇದುವರೆಗೆ 1.5 ಲಕ್ಷ ಮಾಸ್ಕ್‌ಗಳನ್ನು ಒದಗಿಸಲಾಗಿದೆ. ಅಲ್ಲದೇ 25000ಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು 1.25 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಜಿಲ್ಲಾಡಳಿತದ ಮೂಲಕ ವಿತರಿಸಲಾಗಿದೆ. ಪ್ರಸ್ತುತ ಜಿಲ್ಲೆಯ ಪ್ರತಿ ಗ್ರಾ.ಪಂ.ನಲ್ಲಿರುವ ಅತ್ಯಂತ ಕಡುಬಡವರನ್ನು ಗುರುತಿಸಿ ಆಹಾರದ ಕಿಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಜಗದೀಶ ಮಾತನಾಡಿ, ಜಿಲ್ಲೆಯ ದಾನಿಗಳು ನೀಡಿದ ನೆರವಿನಿಂದ ಜಿಲ್ಲೆಯಲ್ಲಿನ ನಿರಾಶ್ರಿತರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ಅಗತ್ಯವಿದ್ದ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ. ದಾನಿಗಳು ಉದಾರವಾಗಿ ನೆರವು ನೀಡಿದ್ದರಿಂದ ಜಿಲ್ಲಾಡಳಿತದ ಹಣ ಬಳಸುವ ಅಗತ್ಯವೇ ಕಂಡು ಬಂದಿಲ್ಲ ಎಂದು ಹೇಳಿದರು. ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸವಿತಾ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss