Thursday, July 7, 2022

Latest Posts

ಉಡುಪಿ| ಕೋವಿಡ್-19 ಸೋಂಕು ಪರೀಕ್ಷೆಗೊಳಪಟ್ಟ 86 ಮಂದಿಯ ವೈದ್ಯಕೀಯ ವರದಿಗಳು ನೆಗೆಟಿವ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪರೀಕ್ಷೆಗೊಳಪಟ್ಟ 86 ಮಂದಿಯ ವೈದ್ಯಕೀಯ ವರದಿಗಳು ಗುರುವಾರ ಆರೋಗ್ಯ ಇಲಾಖೆ ಕೈಸೇರಿದ್ದು, ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 1410 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಅದರಲ್ಲಿ 1327 ಮಂದಿಯಲ್ಲಿ ಸೋಂಕಿಲ್ಲದಿರುವುದು ದೃಢಪಟ್ಟಿದೆ. ಸೋಂಕು ಕಾಣಿಸಿಕೊಂಡ ಮೂವರು ಗುಣಮುಖರಾಗಿದ್ದಾರೆ. ಇನ್ನೂ 80 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಪ್ರಯೋಗಾಲಯದಿಂದ ಬರಲು ಬಾಕಿ ಇದೆ ಎಂದು ಡಿಎಚ್‌ಒ ವಿವರಿಸಿದ್ದಾರೆ.
ವಿವಿಧ ಆಸ್ಪತ್ರೆಗಳ ಪ್ರತ್ಯೇಕಿತ ವಾರ್ಡ್‌ಗೆ 12 ಮಂದಿ ಹೊಸದಾಗಿ ದಾಖಲಾಗಿದ್ದಾರೆ. ನಾಲ್ವರು ಶೀತಜ್ವರದಿಂದ ಬಳಲುತ್ತಿದ್ದರೆ, 8 ಮಂದಿ ತೀವ್ರ ಉಸಿರಾಟದ ತೊಂದರೆಗೀಡಾಗಿದವರು. ಗುರುವಾರ 10 ಮಂದಿ ಬಿಡುಗಡೆಯಾಗಿದ್ದು, ಒಟ್ಟು 50 ಮಂದಿ ಪ್ರತ್ಯೇಕಿತ ವಾರ್ಡ್‌ಗಳಲ್ಲಿ ನಿಗಾದಲ್ಲಿದ್ದಾರೆ. ಲೋ ರಿಸ್ಕ್ ಮತ್ತು ಹೈರಿಸ್ಕ್ ಇರುವ 26 ಜನ ಆಸ್ಪತ್ರೆ ದಿಗ್ಬಂಧನದಲ್ಲಿ ನಿಗಾದಲ್ಲಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಒಟ್ಟು 53 ಮಂದಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಈ ಪೈಕಿ 39 ಮಂದಿ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರು, 8 ಮಂದಿ ತೀವ್ರ ಉಸಿರಾಟದ ತೊಂದರೆ ಇರುವವರು ಮತ್ತು ಆರು ಜನ ಶೀತಜ್ವರ ಹೊಂದಿರುವವರಾಗಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರು, ಕೋವಿಡ್-19 ಸೋಂಕಿತರ ಸಂಪರ್ಕದಲ್ಲಿದ್ದವರು ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇದ್ದ 103 ಮಂದಿ ನಿಗಾಕ್ಕೆ ಹೊಸದಾಗಿ ನೋಂದಣಿಯಾಗಿದ್ದಾರೆ. ಇದರೊಂದಿಗೆ ನೋಂದಣಿಯಾದವರು ಸಂಖ್ಯೆ 4124ಕ್ಕೇರಿದೆ. ಅಲ್ಲದೇ ಹೊಸದಾಗಿ 86 ಮಂದಿ ಸೇರಿ ಒಟ್ಟು 2503 ಜನರು 28 ದಿನಗಳ ಹಾಗೂ 85 ಜನ ಹೊಸದಾಗಿ ಸೇರಿ 3363 ಮಂದಿ 14 ದಿನಗಳ ಗೃಹ ದಿಗ್ಬಂಧನ ಅವಧಿಯನ್ನು ಪೂರೈಸಿದ್ದಾರೆ. ಒಟ್ಟು 685 ಮಂದಿ ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss