Thursday, July 7, 2022

Latest Posts

ಉಡುಪಿ | ಖಾಲಿ ಸೈಟಿನಲ್ಲಿರುವ ಹುಲ್ಲು ಕಟಾವು ಮಾಡಿ, ಇಲ್ಲದಿದ್ದರೆ ದಂಡ ಕಟ್ಟಿ!

ಮಣಿಪಾಲ: ಉಡುಪಿ ನಗರಸಭೆ ವ್ಯಾಪ್ತಿಯ ಖಾಲಿ ಜಾಗಗಳಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಯಲು ಸಂಬಂಧಪಟ್ಟ ಜಾಗದ ಮಾಲೀಕರಿಗೆ ಸೂಚನೆ ನೀಡಬೇಕು. ನಿಗದಿತ ಅವಧಿಯಲ್ಲಿ ಕಳೆ ಕಟಾವು ಮಾಡಿದ್ದರ ಸಂಬಂಧಪಟ್ಟವರಿಗೆ ದಂಡ ವಿಧಿಸಲು ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ಉಡುಪಿ ನಗರಸಭೆಯ ವಾರ್ಡ್‌ಗಳಲ್ಲಿನ ಸಮಸ್ಯೆಗಳ ಕುರಿತ ಸಂಬಂಧಪಟ್ಟ ನಗರಸಭಾ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ಡ್‌ಗಳಲ್ಲಿ ಪ್ರಮುಖವಾಗಿರುವ ಕುಡಿಯುವ ನೀರು, ವಿದ್ಯುತ್ ದೀಪ ಸಮಸ್ಯೆ ಮತ್ತು ನೈರ್ಮಲ್ಯದ ಕುರಿತು ಸಮಸ್ಯೆಗಳನ್ನು ಆದ್ಯತೆಯಲ್ಲಿ ಬಗೆಹರಿಸಬೇಕು. ವಾರ್ಡ್‌ಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಅವರಿಗೆ ಕಳೆ ತೆಗೆಯುವ ಯಂತ್ರಗಳನ್ನು ನೀಡಬೇಕು. ಖಾಸಗಿ ಖಾಲಿ ಜಾಗಗಳಲ್ಲಿ ಬೆಳೆದ ಕಳೆಗಿಡಗಳನ್ನು ತೆರವು ಮಾಡಲು ಸೂಚನೆ, ತಪ್ಪಿದರೆ ದಂಡ ವಿಧಿಸುವ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಣಿಪಾಲದಲ್ಲಿ ರಸ್ತೆ ಅಗಲೀಕರಣದಿಂದ ಸಂತ್ರಸ್ತರಾಗುವ ಗೂಡಂಗಡಿಗಳ ಮಾಲೀಕರಿಗೆ ವ್ಯಾಪಾರಕ್ಕಾಗಿ ಪರ್ಯಾಯ ಜಾಗ ಗುರುತಿಸಿ, ರಸ್ತೆ ಬದಿಯಲ್ಲಿ ಅನುಮತಿ ಇಲ್ಲದೇ ವ್ಯಾಪಾರ ಮಾಡುವವರು ವಿರುದ್ಧ ಕ್ರಮ ಕೈಗೊಳ್ಳಿ, ವಾರ್ಡ್‌ಗಳಲ್ಲಿನ ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚುವಂತೆ ಸಂಸದರು ಸೂಚನೆ ನೀಡಿದರು.
ನಗರಸಭೆಯ ಪ್ರಸ್ತುತ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಾಣ ಕುರಿತಂತೆ ಸದಸ್ಯರೊಬ್ಬರ ಮಾತಿಗೆ ಉತ್ತರಿಸಿದ ಸಂಸದರು, ಉಡುಪಿಯ ಹಳೇ ತಾಲೂಕು ಕಚೇರಿ ಬಳಿ ನಿರ್ಮಾಣ ಮಾಡುವಂತೆ ಈ ಹಿಂದೆ ಸಲ್ಲಿಸಿದ್ದ ಮನವಿ ಕುರಿತು ಪ್ರಶ್ನಿಸಿದರು. ಸದ್ರಿ ಜಾಗವನ್ನು ನಗರಸಭೆಗೆ ನೀಡುವ ಕುರಿತ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದರು.
ನಗರಸಭಾ ವ್ಯಾಪ್ತಿಯಲ್ಲಿನ ಬೀದಿ ದೀಪಗಳನ್ನು 15ದಿನದಲ್ಲಿ ಸಮರ್ಪಕ ನಿರ್ವಹಣೆ ಮಾಡಲಾಗುವುದು, ಎಲ್ಲ ವಾರ್ಡ್‌ಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದರು.
ರಕ್ಷಾ ಸಾವು: ತಜ್ಞರ ತಂಡದ ತನಿಖೆ ಪೂರ್ಣ
ಇತ್ತೀಚೆಗೆ ಮೃತಪಟ್ಟ ಇಂದಿರಾನಗರದ ಮಹಿಳೆ ರಕ್ಷಾ ಸಾವಿನ ವರದಿ ಕುರಿತು ಸ್ಥಳೀಯ ವಾರ್ಡ್‌ನ ಸದಸ್ಯರು ಕೋರಿದರು. ಈ ಕುರಿತು ಉತ್ತರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ, ತನಿಖೆಗಾಗಿ ನೇಮಿಸಿದ್ದ ತಜ್ಞ ವೈದ್ಯರ ವರದಿ ಪೂರ್ಣಗೊಂಡಿದೆ. ಮರಣೋತ್ತರ ವರದಿ ಮತ್ತು ಎಫ್.ಎಸ್.ಎಲ್. ವರದಿಗಾಗಿ ಕಾಯಲಾಗುತ್ತಿದೆ. ಸಿ.ಒ.ಡಿ. ತನಿಖೆ ಸಹ ನಡೆಯುತ್ತಿದೆ. ಪ್ರಕರಣವನ್ನು ಅತ್ಯಂತ ಗಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ನಗರಸಭೆಯ ವಿವಿಧ ವಾರ್ಡ್‌ಗಳ ಸದಸ್ಯರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಪೌರಾಯುಕ್ತ ಆನಂದ ಕಲ್ಲೋಳಿಕರ್ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss