ಉಡುಪಿ | ಗಂಟಲ ದ್ರವ ಮಾದರಿಗಳು ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನೆ

0
188

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 1082 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಪಡೆಯಲಾಗಿದ್ದು, ಎಲ್ಲ ಮಾದರಿಗಳನ್ನು ಮಂಗಳೂರಿನ ಯೆನಪೋಯಾ ಆಸ್ಪತ್ರೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮಂಗಳೂರಿನ ವೆನ್ಲಾಕ್ ಹಾಗೂ ಮಣಿಪಾಲದ ಕೆಎಂಸಿಯಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಸಾಕಷ್ಟು ಸಂಖ್ಯೆಯಲ್ಲಿ ಮಾದರಿಗಳು ಬಾಕಿ ಇರುವುದರಿಂದ ಹೊಸದಾಗಿ ಯೆನಪೋಯಾ ಆಸ್ಪತ್ರೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ವಿವಿಧ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 1026 ಮಂದಿ, ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 22 ಮಂದಿ, ಶೀತಜ್ವರದಿಂದ ಬಾಧಿತರಾದ 25 ಮತ್ತು ತೀವ್ರ ಉಸಿರಾಟದ ತೊಂದರೆ ಇರುವ 9 ಮಂದಿ ಸೇರಿ ಒಟ್ಟು 1082 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಮಂಗಳೂರು ಮತ್ತು ಮಣಿಪಾಲದ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾದ ಒಟ್ಟು 2409 ಮಾದರಿಗಳ ಪರೀಕ್ಷಾ ವರದಿಗಳು ಬರುವುದಕ್ಕೆ ಬಾಕಿ ಇದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಇದರಲ್ಲಿ ಬಹುತೇಕ ಹೊರ ರಾಜ್ಯ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಮಾದರಿಗಳಾಗಿವೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳ ಪ್ರತ್ಯೇಕಿತ ವಾರ್ಡ್‌ಗಳಲ್ಲಿ 17 ಮಂದಿ ದಾಖಲಾಗಿದ್ದಾರೆ. ಈ ಪೈಕಿ 5ಮಂದಿ ತೀವ್ರ ಉಸಿರಾಟದ ತೊಂದರೆ, ನಾಲ್ವರು ಶಂಕಿತ ರೋಗ ಲಕ್ಷಣಗಳು ಹಾಗೂ 8 ಮಂದಿ ಶೀತಜ್ವರದಿಂದ ಬಂದಿದ್ದಾರೆ. ಪ್ರತ್ಯೇಕಿತ ವಾರ್ಡ್‌ಗಳಲ್ಲಿ ಒಟ್ಟು 96 ಮಂದಿ ನಿಗಾದಲ್ಲಿದ್ದಾರೆ.
ಹೊಸದಾಗಿ ಆರೋಗ್ಯ ಇಲಾಖೆಗೆ 160 ವರದಿಗಳು ದೊರೆತಿದ್ದು, ಈ ಪೈಕಿ 157 ವರದಿಗಳು ನೆಗೆಟಿವ್, ಉಳಿದ ಮೂರು ಪಾಸಿಟಿವ್ ಬಂದಿವೆ. ಪ್ರಸ್ತುತ ಜಿಲ್ಲೆಯಲ್ಲಿ 8010 ಸಾಂಸ್ಥಿಕ ದಿಗ್ಬಂಧನ, 400 ಮಂದಿ ಗೃಹ ದಿಗ್ಬಂಧನ, 79 ಮಂದಿ ಆಸ್ಪತ್ರೆ ದಿಗ್ಬಂಧನದಲ್ಲಿದ್ದಾರೆ.

LEAVE A REPLY

Please enter your comment!
Please enter your name here