ಉಡುಪಿ: ಕಾರ್ಕಳ ತಾಲೂಕಿನಲ್ಲಿ ಗಂಟಲ ದ್ರವ ಮಾದರಿ ಸಂಗ್ರಹಿಸುವ ಸಂಚಾರಿ ಘಟಕಕ್ಕೆ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ವಿಧಾನ ಸಭೆ ಮುಖ್ಯ ಸಚೇತಕ ಮತ್ತು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ವಾಹನಕ್ಕೆ ಚಾಲನೆ ನೀಡಿ ಶುಭ ಕೋರಿದರು.
ಕಾರ್ಕಳ ತಾಲೂಕಿನ ವಿವಿಧ ದಿಗ್ಬಂಧನ ಕೇಂದ್ರದಲ್ಲಿ ಹಾಗೂ ಗೃಹ ದಿಗ್ಬಂಧನದಲ್ಲಿರುವ ಗರ್ಭಿಣಿ, ಮಕ್ಕಳು, ವಯೋವೃದ್ಧರು ಹಾಗೂ ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಇನ್ನಿತರ ಶಂಕಿತ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಅವರ ಮನೆ ಬಾಗಿಲಲ್ಲೇ ಮಾದರಿ ಸಂಗ್ರಹಕ್ಕಾಗಿ ಈ ವಾಹನವನ್ನು ಬಳಸಲಾಗುತ್ತದೆ. ಈ ವಾಹನವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ನಿರ್ವಹಿಸಲಾಗುತ್ತದೆ.
ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಉಡುಪಿ ಕರ್ನಾಟಕ ಸರಕಾರಿ ನೌಕರರ ಅಧ್ಯಕ್ಷ ಸುಬ್ರಹ್ಮಣ್ಯ ಸೇರಿಗಾರ್, ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿನ ವೈದ್ಯಾಧಿಕಾರಿ ಡಾ. ಪ್ರಕಾಶ್ ಕುಮಾರ್ ವಂದಿಸಿದರು.