ಉಡುಪಿ: ಬ್ರಹ್ಮಾವರದ ಧರ್ಮಾವರಂ ಆಡಿಟೋರಿಯಂ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಸೆನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಗಳಿಂದ 2ಕೆ.ಜಿ.ಗೂ ಅಧಿಕ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾಮ ನಿವಾಸಿಗಳಾದ ಆಸೀಫ್ ಬಾಷಾ (38) ಮತ್ತು ರಿಯಾಜ್ (29) ಬಂಧಿತ ಆರೋಪಿಗಳಾಗಿದ್ದಾರೆ.
ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಅವರು, ಸಿಬ್ಬಂದಿಯವರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ವಾರಂಬಳ್ಳಿ ಗ್ರಾಮದ ಧರ್ಮಾವರಂ ಆಡಿಟೋರಿಯಂನ ಬಳಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಕಾರಿನಲ್ಲಿ ಕುಳಿತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ 2.038 ಕಿಲೋ ಗ್ರಾಂ ತೂಕದ ಗಾಂಜಾ, 2 ಮೊಬೈಲ್ ಫೋನ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 3,13,500 ರೂ. ಆಗಿದೆ.
ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ಲಕ್ಷ್ಮಣ, ನಾರಾಯಣ, ಎ.ಎಸ್.ಐ. ಕೇಶವ ಗೌಡ ಹಾಗೂ ಸಿಬ್ಬಂದಿಯವರಾದ ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ಶ್ರೀಧರ, ಪ್ರವೀಣ, ಪ್ರದೀಪ ಶೆಟ್ಟಿ, ಅರುಣ್ ಶೆಟ್ಟಿ ಮತ್ತು ಚಾಲಕ ನವೀನಚಂದ್ರ ಪಾಲ್ಗೊಂಡಿದ್ದರು.