ಹೊಸ ದಿಗಂತ ವರದಿ, ಉಡುಪಿ:
ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮತದಾನದ ಏಳು ತಾಲೂಕುಗಳ ಮತ ಎಣಿಕೆ ಕಾರ್ಯ ಬೆಳಗ್ಗೆ ಆರಂಭವಾಗಿದೆ.
ಉಡುಪಿ ಜಿಲ್ಲೆಯ ಏಳು ತಾಲೂಕುಗಳ ಒಟ್ಟು 152 ಪಂಚಾಯತ್ ಗಳ ಜಿಲ್ಲೆಯ ಏಳು ತಾಲೂಕು ಕೇಂದ್ರಗಳಾದ ಉಡುಪಿಯಲ್ಲಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ, ಬ್ರಹ್ಮಾವರಯಲ್ಲಿ ಎಸ್ ಎಂ ಎಸ್ ಪದವಿಪೂರ್ವ ಕಾಲೇಜು, ಬೈಂದೂರಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಹೆಬ್ರಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರದಲ್ಲಿ ಭಂಡಾರ್ಕಾರ್ಸ್ ಕಾಲೇಜು, ಕಾರ್ಕಳದಲ್ಲಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಪುವಿನಲ್ಲಿ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ.
ಜಿಲ್ಲೆಯ 152 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಕಾರ್ಯಕ್ಕೆ ಒಟ್ಟು 948 ಸಿಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 863 ಚುನಾವಣಾ ಕ್ಷೇತ್ರಗಳ ಮತ ಎಣಿಕೆಗೆ 284 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ 152 ಗ್ರಾ.ಪಂ.ಗಳ 863 ಕ್ಷೇತ್ರಗಳಿಗೆ ಒಟ್ಟು 2245 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ 5055 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಒಟ್ಟು 1136 ಮತಗಟ್ಟೆಗಳಲ್ಲಿ 5,83,342 ಮಂದಿ ಮತಚಲಾಯಿಸಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ 128 ಸ್ಥಾನಗಳಿಗೆ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.