ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.
ಅವರು ಶನಿವಾರ ಉಡುಪಿ ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲ ಗ್ರಾಮೀಣ ಗ್ರಾಮ/ಜನವಸತಿಗಳಿಗೆ 2024 ರೊಳಗೆ ಮನೆಗಳಿಗೆ ನಳ್ಳಿ ಮೂಲಕ , ಪ್ರತಿ ವ್ಯಕ್ತಿಗೆ 55 ಎಲ್.ಪಿ.ಸಿ.ಡಿ. ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಾಗಿದೆ. ಈ ಯೋಜನೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ, ಬೇಸಗೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಗ್ರಾಮಗಳಿಗೆ ಪ್ರಥಮಾದ್ಯತೆಯಲ್ಲಿ ಸಂಪರ್ಕ ನೀಡಬೇಕು. ಈ ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವ್ಯಾಪ್ತಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕ್ಷೇತ್ರದ ಶಾಸಕರಿಗೆ ಯೋಜನೆಯ ಸಮಗ್ರ ವಿವರಗಳನ್ನು ಪ್ರತ್ಯೇಕ ಸಭೆ ನಡೆಸಿ ನೀಡಲು ಶಾಸಕ ಹಾಲಾಡಿ ತಿಳಿಸಿದರು.
ಬೆಳೆ ಸಮೀಕ್ಷೆ ಸೆ. 23ರವರೆಗೆ ವಿಸ್ತರಣೆ
ನನ್ನ ಬೆಳೆ ನನ್ನ ಹಕ್ಕು ಘೋಷಣೆಯಡಿ ಆರಂಭವಾಗಿರುವ ರೈತರ ಬೆಳೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಸ್ತುತ ಸೆಪ್ಟಂಬರ್ 23 ಅಂತಿಮ ದಿನಾಂಕವಾಗಿದೆ. ಉಡುಪಿ ಜಿಲ್ಲೆಯ ರೈತರು ಯೋಜನೆಯ ಪ್ರಯೋಜನವನ್ನು ಪಡೆಯುಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಚ್. ಕೆಂಪೇಗೌಡ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಜಿ.ಪಂ. ಸಿಇಒ ಪ್ರೀತಿ ಗೆಹ್ಲೋತ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.